ಜಿನೇವಾ: ರಷ್ಯಾ – ಉಕ್ರೇನ್ ಯುದ್ಧ ಸಂಘರ್ಷಕ್ಕೆ ಉಕ್ರೇನಿನ 691 ನಾಗರಿಕರು ಬಲಿಯಾಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಕಳೆದ 20 ದಿನಗಳಿಂದ ರಷ್ಯಾ ನಡೆಸುತ್ತಿರುವ ಆಕ್ರಮಣಕ್ಕೆ 48 ಮಕ್ಕಳು ಸೇರಿದಂತೆ 691 ಜನರು ಬಲಿಯಾಗಿದ್ದು, 1,143 ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ತಿಳಿಸಿದೆ.
ರಷ್ಯಾ ಮಾರಿಯುಪೋಲ್ ದಕ್ಷಿಣ ನಗರ ಮತ್ತು ಡೊನೆಟ್ಸ್ಕ್ ಪ್ರದೇಶದ ವೊಲ್ನೋವಾಖಾ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ತೀವ್ರ ಆಕ್ರಮಣ ನಡೆಸಿದೆ. ಹಾಗೂ ವರದಿಗಳ ವಿಳಂಬದ ಕಾರಣಗಳಿಂದಾಗಿ ನಾಗರಿಕರ ಸಾವುನೋವುಗಳ ಅಂಕಿ ಅಂಶಗಳಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಇಂದು ನಾಲ್ವರು ಬಲಿ:
ಇಂದು ಬೆಳಗ್ಗೆ ರಾಜಧಾನಿ ಕೀವ್ ಮೇಲೆ ರಷ್ಯಾ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಲ್ವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಕೀವ್ ಮೇಯರ್ ಮಾಹಿತಿ ನೀಡಿದ್ದಾರೆ. ಅಲ್ಲದೇ ಕೀವ್ ನಗರವನ್ನು ರಷ್ಯಾ ಸೈನಿಕರು ಸುತ್ತುವರೆದಿದ್ದು ಕೀವ್ ನಗರದಲ್ಲಿ ಮಂಗಳವಾರ ರಾತ್ರಿಯಿಂದ 35 ಗಂಟೆಗಳ ಕರ್ಫ್ಯೂ ವಿಧಿಸಲಾಗಿದೆ ಎಂದು ಮೇಯರ್ ಘೋಷಿಸಿದ್ದಾರೆ.