ಉಡುಪಿ: ಅಂಡರ್ ಪಾಸ್ ನಿರ್ಮಾಣ ಪ್ರದೇಶದಲ್ಲಿ ಸರ್ವೀಸ್ ರಸ್ತೆ ಕುಸಿದು ಬಿದ್ದ ಘಟನೆ ಇಲ್ಲಿನ ಸಂತೆಕಟ್ಟೆ ಬಳಿ ನಡೆದಿದೆ.
ಪರಿಣಾಮ ಸುಮಾರು 350ಕ್ಕೂ ಹೆಚ್ಚು ಮನೆ , ಹಾಗೂ ಅಂಗಡಿ ಮುಂಗಟ್ಟುಗಳಿಗೆ ರಸ್ತೆಯೇ ಇಲ್ಲದಂತಾಗಿದೆ.
ಅಂಡರ್ಪಾಸ್ ನಿರ್ಮಾಣದ ಸನಿಹವಿದ್ದ ತಡೆಗೋಡೆ ಸೋಮವಾರ ಬೆಳಿಗ್ಗೆ ಭಾಗಶಃ ಕುಸಿದಿದೆ. ಇದರಿಂದಾಗಿ ಸರ್ವಿಸ್ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಕುಸಿಯುವ ಆತಂಕವನ್ನು ಇಲ್ಲಿನ ನಿವಾಸಿಗಳು ಮತ್ತು ಚಿಲ್ಲರೆ ಅಂಗಡಿ ಮಾಲೀಕರು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಂತೆಕಟ್ಟೆ ಹಾಗೂ ನಯಂಪಳ್ಳಿ ಗ್ರಾಮಸ್ಥರು ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದು ಸುಮಾರು 300ಕ್ಕೂ ಅಧಿಕ ಕುಟುಂಬಗಳು ರಸ್ತೆ ಸಂಪರ್ಕ ಕಡಿತದ ಭೀತಿಯಲ್ಲಿವೆ ಎನ್ನಲಾಗಿದೆ.