ಚಾರ್ಮಾಡಿ ಘಾಟ್ ಬಳಿ ಪ್ರವಾಸಿಗರ ಹುಚ್ಚಾಟ: ಟ್ರಾಫಿಕ್ ಜಾಮ್ ಭೀತಿ

Prasthutha|

ಚಿಕ್ಕಮಗಳೂರು: ಜಿನುಗು ಮಳೆಯ ನಡುವೆಯೇ ಕಾಫಿನಾಡಿನ ಪ್ರವಾಸಿ ತಾಣಗಳತ್ತ ಪ್ರತಿನಿತ್ಯವೂ ಸಾಗರೋಪಾದಿಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಪ್ರವಾಸಿಗರು ರಸ್ತೆಗಳ ಮಧ್ಯೆ ವಾಹನಗಳನ್ನು ನಿಲ್ಲಿಸಿಕೊಂಡು ಹುಚ್ಚಾಟ ಮೆರೆಯುತ್ತಿದ್ದಾರೆ.

- Advertisement -

ಚಿಕ್ಕಮಗಳೂರು-ದಕ್ಷಿಣಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ನಲ್ಲಿ ಪ್ರವಾಸಿಗರಿಗೆ ಹೇಳೋರಿಲ್ಲ-ಕೇಳೋರಿಲ್ಲ ಎಂಬಂತಾಗಿದ್ದು, ಜಲಪಾತಗಳ ಮೇಲೆ ಹತ್ತುವ ದುಸ್ಸಾಹಸಕ್ಕೂ ಪ್ರವಾಸಿಗರು ಮುಂದಾಗಿದ್ದಾರೆ. ಈ ಭಾಗದಲ್ಲಿ ಮೊದಲೇ ಕಿರಿದಾದ ರಸ್ತೆಗಳು ಇದ್ದು, ವಾಹನ ಸವಾರರಿಗೆ ಇಕ್ಕಟ್ಟು ಆದಂತಾಗಿದೆ. ಇಂತಹದ್ದರಲ್ಲೂ ಕೆಲವರು ರಸ್ತೆ ಮಧ್ಯೆಯೆ ಕಾರ್ಗಳನ್ನು ನಿಲ್ಲಿಸಿ ಪುಂಡಾಟ ಮೆರೆಯುವ ಮೂಲಕ ಇನ್ನುಳಿದ ವಾಹನ ಸವಾರರಿಗೂ ಕಿರಿಕಿರಿ ಆಗುವಂತೆ ಮಾಡುತ್ತಿದ್ದಾರೆ. ದಟ್ಟ ಮಂಜು ಕವಿದ ದಾರಿಯಲ್ಲಿ ವಾಹನ ಪಾರ್ಕಿಂಗ್ ಮಾಡಿ ಡ್ಯಾನ್ಸ್ ಮಾಡುವ ಭರದಲ್ಲಿ ಇನ್ನುಳಿದ ವಾಹನಗಳಿಗೂ ಅಡ್ಡಲಾಗಿ ನಿಲ್ಲುತ್ತಿದ್ದಾರೆ.

ಇದರಿಂದ ಅಪಾಘಾತ, ಟ್ರಾಫಿಕ್ ಜಾಮ್ಗೂ ಆಹ್ವಾನ ನೀಡಿದಂತಾಗಿದೆ. ಅಷ್ಟೇ ಅಲ್ಲದೆ ಜಲಪಾತಗಳ ಮೇಲೆ ಹತ್ತುವ ದುಸ್ಸಾಹಸಕ್ಕೂ ಕೂಡ ಕೆಲವು ಪ್ರವಾಸಿಗರು ಮುಂದಾಗುತ್ತಿದ್ದಾರೆ. ಈ ಹುಚ್ಚಾಟದಿಂದ ಬೇಸತ್ತ ಸ್ಥಳೀಯರು ಜಲಪಾತಗಳ ಬಳಿ ಪೊಲೀಸರು ಬೀಟ್ ಹಾಕುವಂತೆ ಮನವಿ ಮಾಡಿದ್ದಾರೆ.