ಹಿಜಾಬ್ ವಿಚಾರ| ಮುಸ್ಲಿಂ ವಿದ್ಯಾರ್ಥಿನಿಯರನ್ನು ವಿದ್ಯೆಯಿಂದ ಹೊರಗಿಡುವ ಹುನ್ನಾರ: ಮುಸ್ಲಿಂ ಒಕ್ಕೂಟ ಆಕ್ರೋಶ

Prasthutha|

- Advertisement -

ಉಡುಪಿ: ಕುಂದಾಪುರದ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಮುಸ್ಲಿಂ ವಿದ್ಯಾರ್ಥಿನಿಯರನ್ನು ವಿದ್ಯೆಯಿಂದ ಹೊರಗಿಡುವ ಹುನ್ನಾರ ನಡೆಸಲಾಗುತ್ತಿದೆ ಎಂದು ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಙ ಮುಸ್ಲಿಂ ವಿದ್ಯಾರ್ಥಿನಿಯರನ್ನು ಶಿರವಸ್ತ್ರ ಧರಿಸಿ ಬಂದರೆ ಕಾಲೇಜು ಒಳಗಡೆ ಬಿಡುವುದಿಲ್ಲ ಎಂದು ಹೇಳಿದ್ದಲ್ಲದೆ ಸ್ವತಃ ಗೇಟನ್ನು ಹಾಕಿ ವಿದ್ಯಾರ್ಥಿನಿಯರನ್ನು ಕಾಲೇಜಿನೊಳಗೆ ಬಾರದಂತೆ ತಡೆದಿರುವ ಘಟನೆ ಖಂಡನೀಯ ಎಂದು ಅವರು ತಿಳಿಸಿದ್ದಾರೆ.

- Advertisement -

ಮುಸ್ಲಿಂ ವಿದ್ಯಾರ್ಥಿನಿಯರು ಶೈಕ್ಷಣಿಕ ವರ್ಷದ ಆರಂಭದಿಂದಲೂ ತರಗತಿಯಲ್ಲಿ ಹಿಜಾಬ್ ಧರಿಸುತ್ತಿದ್ದಾರೆ. ಹಿಂದೆಯೂ ಮುಸ್ಲಿಂ ವಿದ್ಯಾರ್ಥಿನಿಯರೂ ಹಿಜಾಬ್ ಧರಿಸುತ್ತಿದ್ದರು. ಈಗ ಏಕಾಏಕಿ ಶಿರವಸ್ತ್ರ ಧರಿಸಿ ಬಂದರೆ ಕಾಲೇಜಿನ ಒಳಗೆ ಪ್ರವೇಶವಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಹೇಳುತ್ತಿರುವುದು ಖಂಡನೀಯ. ಪ್ರಾಂಶುಪಾಲರ ಧೋರಣೆ ಮುಸ್ಲಿಂ ವಿದ್ಯಾರ್ಥಿನಿಯರನ್ನು ಶಿಕ್ಷಣ ಪಡೆಯಲು ತರಗತಿಗೆ ಬಾರದಂತೆ ತಡೆಯುತ್ತಿದೆ. ಪ್ರಾಂಶುಪಾಲರ ಹೇಳಿಕೆ ಹಿಂದೆ ಯಾರ ಕೈವಾಡ ಇದೆ. ಶಿಕ್ಷಣ ಪಡೆಯಲು ಎದುರಾಗುವ ಅಡೆತಡೆಗಳನ್ನು ನಿವಾರಿಸಿ ವಿದ್ಯೆ ನೀಡಬೇಕಾದ ಪ್ರಾಂಶುಪಾಲರೇ ವಿದ್ಯಾರ್ಥಿನಿಯರಿಗೆ ವಿದ್ಯೆಯ ಬಾಗಿಲನ್ನು ಮುಚ್ಚುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಪ್ರಾಂಶುಪಾಲರು ಕರ್ತವ್ಯ ನಿಷ್ಠೆ ಮರೆತಿದ್ದು, ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಇದು ದೇಶದ ಸಂವಿಧಾನದ ಮೂಲತತ್ವಗಳ ಉಲ್ಲಂಘನೆಯಾಗಿದ್ದು, ಶಿಕ್ಷಣದ ಹಕ್ಕಿನ ನಿರಾಕರಣೆಯಾಗಿದೆ. ಮಾನವ ಹಕ್ಕು ಆಯೋಗ ಮಧ್ಯೆ ಪ್ರವೇಶಿಸಿ ವಿದ್ಯಾರ್ಥಿನಿಯರಿಗೆ ನ್ಯಾಯ ಕೊಡಿಸಬೇಕು. ಅವರ ಶೈಕ್ಷಣಿಕ ಬದುಕು ಹಾಗೂ ಭವಿಷ್ಯ ಹಾಳಾಗದಂತೆ ನೋಡಿಕೊಳ್ಳಬೇಕು. ಹಿಂದಿನಂತೆ ಮುಸ್ಲಿಂ ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸಿ ಹಾಜರಾಗಲು ಅನುಮತಿ ನೀಡಬೇಕು ಎಂದು ಇಬ್ರಾಹಿಂ ಸಾಹೇಬ್ ಕೋಟ ಆಗ್ರಹಿಸಿದ್ದಾರೆ.

Join Whatsapp