ಉದಯಪುರ: ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ರಿಯಾಝ್ ಅತ್ತಾರಿ ಮತ್ತು ಮುಹಮ್ಮದ್ ಗೌಸ್ ಬಿಜೆಪಿ ಜೊತೆಗೆ ಸಂಪರ್ಕದಲ್ಲಿದ್ದರು ಎಂದು ತನಿಖಾ ವರದಿಯೊಂದು ಶುಕ್ರವಾರ ಬಹಿರಂಗಪಡಿಸಿದೆ. ಜೊತೆಗೆ RSS ಅಂಗಸಂಸ್ಥೆ ಎಂಆರ್ ಎಂ ನಾಯಕನ ಜೊತೆಗೆ ಹಂತಕನು ತೆಗೆಸಿಕೊಂಡ ಚಿತ್ರಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಕಳೆದ ಹತ್ತು ವರ್ಷಗಳಿಂದ ರಾಜಸ್ಥಾನದ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯರಾಗಿರುವ ಇರ್ಷಾದ್ ಚೈನ್ವಾಲಾ ಅವರು, ಹಂತಕ ರಿಯಾಝ್ ಅತ್ತಾರಿ 2019 ರಲ್ಲಿ ಉಮ್ರಾದಿಂದ ಹಿಂದಿರುಗಿದಾಗ ಸ್ವಾಗತಿಸಿದ್ದರು. ಈ ಚಿತ್ರವನ್ನು ಇಂಡಿಯಾ ಟುಡೆ ತನ್ನ ತನಿಖಾ ವರದಿಯಲ್ಲಿ ಬಹಿರಂಗ ಪಡಿಸಿದ್ದು, ರಿಯಾಝ್ ಉದಯಪುರದ ಬಿಜೆಪಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದನು ಎಂದು ವರದಿ ಮಾಡಿದೆ. ಈ ಬಗ್ಗೆ ಸ್ವತ ಇರ್ಷಾದ್ ಚೈನ್ವಾಲಾ ಅವರು ಒಪ್ಪಿಕೊಂಡಿದ್ದು , ಆರೋಪಿ ರಿಯಾಝ್ ಉದಯಪುರದಲ್ಲಿ ನಡೆಯುತ್ತಿದ್ದ ಬಿಜೆಪಿ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದ ಎಂದು ಹೇಳಿದ್ದಾರೆ
ಆರೋಪಿ ರಿಯಾಝ್ ಅತ್ತಾರಿಗೆ ಹಾರ ಹಾಕಿ ಸ್ವಾಗತಿಸುತ್ತಿರುವ ಚಿತ್ರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಚೈನ್ವಾಲಾ , ಈ ಚಿತ್ರ ನನ್ನದು. ತೀರ್ಥ ಯಾತ್ರೆಗೆ ತೆರಳಿ ವಾಪಸಾದಾಗ ನಾನು ಅವರಿಗೆ ಹಾರ ಹಾಕಿ ಸ್ವಾಗತಿಸಿದ್ದೆ ಎಂದು ಹೇಳಿದ್ದಾರೆ. ಜೊತೆಗೆ ಬಿಜೆಪಿ ನಾಯಕ ಗುಲಾಬ್ ಚಂದ್ ಕಟಾರಿಯಾ ಅವರ ಅನೇಕ ಕಾರ್ಯಕ್ರಮಗಳಲ್ಲಿ ಆರೋಪಿ ಭಾಗವಹಿಸಿದ್ದನು ಎಂದು ಕೂಡಾ ಹೇಳಿದ್ದಾರೆ
ಆರೋಪಿ ರಿಯಾಝ್ ಅತ್ತಾರಿ, ಬಿಜೆಪಿ ಕಾರ್ಯಕರ್ತ ಮುಹಮ್ಮದ್ ತಾಹಿರ್ ಎಂಬ ವ್ಯಕ್ತಿಯ ಮೂಲಕ ಬಿಜೆಪಿ ಕಾರ್ಯಕ್ರಮಗಳಿಗೆ ಆಗಮಿಸುತ್ತಿದ್ದನು ಎಂದು ಚೈನ್ ವಾಲಾ ಹೇಳಿದ್ದಾರೆ. ತಾಹಿರ್ ನಮ್ಮ ಕಾರ್ಯಕರ್ತನಾಗಿದ್ದು, ತಾಹಿರ್ ಅವರಿಗೆ ಆರೋಪಿ ರಿಯಾಝ್ ಅತ್ತಾರಿ ಆಪ್ತನಾಗಿದ್ದ ಎಂದು ಅವರು ಹೇಳಿದ್ದಾರೆ.
ತಾಹಿರ್ ಮತ್ತು ರಿಯಾಜ್ ಇಬ್ಬರೂ ಒಟ್ಟಿಗೆ ಇರುವ ಫೋಟೋಗಳು ಬಹಿರಂಗವಾಗಿದೆ. ತಾಹಿರ್ ರಾಜಸ್ಥಾನದ ಸವೀನಾ ಎಂಬ ಪ್ರದೇಶದಲ್ಲಿ ವಾಸಿಸುತ್ತಿದ್ದು, ಆದರೆ ಅವರು ಇದೀಗ ನಾಪತ್ತೆಯಾಗಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ತಾಹಿತ್ ತನ್ನ ಬಾಡಿಗೆ ಮನೆ ಖಾಲಿ ಮಾಡಿದ್ದಾರೆ ಎಂದು ನೆರೆಹೊರೆಯವರು ತಿಳಿಸಿದ್ದು, ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಮಾಡಿದ್ದಾರೆ ಎಂದು ವರದಿ ಹೇಳಿದೆ.
ಮೊಹಮ್ಮದ್ ತಾಹಿರ್ ಅವರು ತನ್ನ ಫೇಸ್ಬುಕ್ ಪೋಸ್ಟ್ಗಳಲ್ಲಿ ಇರ್ಷಾದ್ ಚೈನ್ವಾಲಾ ಅವರನ್ನು ಎಂಆರ್ಎಂ (ಮುಸ್ಲಿಂ ರಾಷ್ಟ್ರೀಯ ಮಂಚ್) ಪ್ರಾಂತ ಸಂಯೋಜಕ ಎಂದು ಉಲ್ಲೇಖಿಸಿದ್ದಾರೆ. ಎಂಆರ್ಎಂ ಎಂಬುವುದು RSS ಅಂಗ ಸಂಸ್ಥೆಯಾಗಿದ್ದು ಈ ಪೋಸ್ಟ್ನಲ್ಲಿ ಹತ್ಯೆಯ ಆರೋಪಿ ರಿಯಾಜ್ ಅತ್ತಾರಿಯನ್ನು ಬಿಜೆಪಿ ಕಾರ್ಯಕರ್ತ ಎಂದು ಉಲ್ಲೇಖಿಸಿದ್ದನ್ನು ಕಾಣಬಹುದಾಗಿದೆ.