ಯುಎಪಿಎ ಪ್ರಕರಣಗಳು | ನಾಲ್ಕು ವರ್ಷಗಳಲ್ಲಿ ಶಿಕ್ಷೆಗೊಳಗಾದವರೆಷ್ಟು?

Prasthutha|

- Advertisement -

ಹೊಸದಿಲ್ಲಿ : ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಯುಎಪಿಎ ಸೇರಿದಂತೆ ದೇಶದ್ರೋಹ ಪ್ರಕರಣಗಳು ವ್ಯಾಪಕವಾಗಿ ದಾಖಲಿಸಲ್ಪಟ್ಟಿದ್ದರೂ ಬೆರಳೆಣಿಕೆಯಷ್ಟು ಮಂದಿ ಮಾತ್ರ ಶಿಕ್ಷೆಗೊಳಗಾಗಿದ್ದಾರೆ. ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಮಂಡಿಸಿದ ಅಂಕಿ ಅಂಶಗಳಿಂದ ಇದು ಸ್ಪಷ್ಟವಾಗಿದೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಸಂಗ್ರಹಿಸಿದ 2019 ರ ಕ್ರೈಮ್ ಇನ್ ಇಂಡಿಯಾ ವರದಿಯ ಪ್ರಕಾರ 2016-2019ರ ಅವಧಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ದಾಖಲಾದ ಶೇಕಡಾ 2.2 ರಷ್ಟು ಪ್ರಕರಣಗಳನ್ನು ಮಾತ್ರ ನ್ಯಾಯಾಲಯವು ಶಿಕ್ಷೆಗೊಳಪಡಿಸಿದೆ.

2019 ರಲ್ಲಿ ಯುಎಪಿಎ ಪ್ರಕರಣದಲ್ಲಿ ಬಂಧಿಸಲ್ಪಟ್ಟವರ ಸಂಖ್ಯೆ 1,948 ಎಂದು ಕೇಂದ್ರ ಗೃಹ ಸಚಿವ ಜಿ ಕಿಶನ್ ರೆಡ್ಡಿ ರಾಜ್ಯಸಭೆಗೆ ತಿಳಿಸಿದ್ದಾರೆ. ಅಂಕಿ ಅಂಶಗಳ ಪ್ರಕಾರ 2016 ಮತ್ತು 2019 ರ ನಡುವೆ ದೇಶದಲ್ಲಿ 5,922 ಜನರನ್ನು ಯುಎಪಿಎ ಪ್ರಕರಣದಲ್ಲಿ ಬಂಧಿಸಲಾಗಿದೆ. ಆದರೆ ಧರ್ಮ, ಜನಾಂಗ, ಜಾತಿ ಆಧಾರದ ಮೇಲೆ ಎನ್‌ಸಿಆರ್‌ಬಿ ದಾಖಲೆಗಳನ್ನು ಇಟ್ಟುಕೊಳ್ಳುತ್ತಿಲ್ಲ ಎಂದು ಸಚಿವರು ಹೇಳಿದ್ದಾರೆ. 2019 ರಲ್ಲಿ ಐಪಿಸಿಯ ಸೆಕ್ಷನ್ 194 (ಎ) ಪ್ರಕಾರ ದೇಶದ್ರೋಹದ ಆರೋಪದಲ್ಲಿ 96 ಜನರನ್ನು ಬಂಧಿಸಲಾಗಿತ್ತಾದರೂ ಇಬ್ಬರು ಮಾತ್ರ ಶಿಕ್ಷೆಗೊಳಗಾಗಿದ್ದರು. 29 ಜನರನ್ನು ಖುಲಾಸೆಗೊಳಿಸಲಾಗಿದೆ. ನೋಂದಾಯಿತ 93 ಪ್ರಕರಣಗಳಲ್ಲಿ 40 ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಲಾಗಿತ್ತು. ಸಾಮಾಜಿಕ ಕಾರ್ಯಕರ್ತರು ಮತ್ತು ಆಡಳಿತ ವ್ಯವಸ್ಥೆಯ ವಿಮರ್ಶಕರ ವಿರುದ್ಧ ಅನ್ಯಾಯವಾಗಿ ಯುಎಪಿಎ ದಾಖಲಿಸಲಾಗುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿರುವ ಮಧ್ಯೆ ನೋಂದಾಯಿತ ಪ್ರಕರಣಗಳಲ್ಲಿ ನ್ಯಾಯಾಲಯವು ಕೆಲವೇ ಕೆಲವು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ವಿಧಿಸಲಾಗಿದೆ ಎಂದು ಕೇಂದ್ರ ಸರ್ಕಾರವೇ ಬಹಿರಂಗಪಡಿಸಿದೆ.

Join Whatsapp