►ವಾರದ ರಜೆ ಬದಲಾವಣೆ ಎನ್ನುವುದು ಸುಳ್ಳೇ? ವಾಸ್ತವವೇನು ?
►ಶುಕ್ರವಾರದ ಜುಮುಆ ನಮಾಝಿಗೆ ನಿರ್ದಿಷ್ಟ ಸಮಯ ನಿಗದಿ
ದುಬೈ : ಯುನೈಟೆಡ್ ಅರಬ್ ಎಮಿರೇಟ್ಸ್ ಇತ್ತೀಚೆಗೆ ತನ್ನ ಸರಕಾರಿ ನೌಕರರ ವಾರದ ರಜೆಯಲ್ಲಿ ಸಂಪೂರ್ಣ ಬದಲಾವಣೆ ಮಾಡಿದ್ದು, ಇದು ಅನಿವಾಸಿ ಭಾರತೀಯರಿಗೆ ನಿಜಕ್ಕೂ ಒಂದು ಶುಭ ಸುದ್ದಿಯಾಗಿದೆ. ಈ ಹಿಂದೆ ಯುಎಇಯಲ್ಲಿ ಶುಕ್ರವಾರ ಮತ್ತು ಶನಿವಾರ ಇಡೀ ದಿನ ವಾರದ ರಜಾ ದಿನವಾಗಿತ್ತು. ಹೊಸ ಬದಲಾವಣೆ ನಿಯಮದಿಂದಾಗಿ ಶುಕ್ರವಾರ ಮಧ್ಯಾಹದಿಂದ, ಶನಿವಾರ ಮತ್ತು ಆದಿತ್ಯವಾರ ಇಡೀ ದಿನ, ಹೀಗೆ ಒಟ್ಟು ಎರಡೂವರೆ ದಿನಗಳು ವಾರದ ರಜಾದಿನವಾಗಿ ಬದಲಾಗಿದೆ.
ಭಾರತೀಯರು ತಮ್ಮ ವೀಸಾ ಸ್ಟ್ಯಾಂಪಿಂಗ್ ಅಥವಾ ರಾಯಭಾರ ಕಚೇರಿಗೆ ಸಂಬಂಧಪಟ್ಟ ಯಾವುದೇ ಕೆಲಸಗಳಿಗಾಗಿ ವಾರದಲ್ಲಿ ಸೀಮಿತ ದಿನಗಳು ಅಂದರೆ ಕೇವಲ ನಾಲ್ಕು ದಿನಗಳಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಬೇಕಾಗಿತ್ತು. ಯಾಕೆಂದರೆ ಯುಎಇಯಲ್ಲಿ ಶುಕ್ರವಾರ ಮತ್ತು ಶನಿವಾರ ವಾರದ ರಜೆಯಾಗಿತ್ತು. ಭಾರತದಲ್ಲಿ ಆದಿತ್ಯವಾರ ರಜಾ ದಿನವಿರುತ್ತಿತ್ತು. ಗುರುವಾರದಂದು ಯಾವುದಾದರೂ ಕೆಲಸ ನಡೆಯದೆ ಬಾಕಿಯಿದ್ದರೆ ಅದನ್ನು ಪೂರ್ಣಗೊಳಿಸಲು ಸೋಮವಾರದವರೆಗೆ ಕಾಯಬೇಕಾಗುತ್ತಿತ್ತು. ಹೊಸ ಬದಲಾವಣೆ ಅನಿವಾಸಿಗಳಿಗೆ ಒಂದು ಶುಭ ಸುದ್ದಿ ಎಂದೇ ಹೇಳಬಹುದಾಗಿದೆ.
ಶುಕ್ರವಾರದ ವಿಶೇಷ ನಮಾಝಿಗೆ ನಿರ್ದಿಷ್ಟ ಸಮಯ ನಿಗದಿ
ಮುಸ್ಲಿಮರ ಶುಕ್ರವಾರದ ವಿಶೇಷ ಪ್ರಾರ್ಥನೆಗೆ ಹೊಸ ರಜಾ ದಿನದ ನಿಯಮಗಳು ಪೂರಕ ವಾತಾವರಣ ಕಲ್ಪಿಸಿದೆ. ಮಧ್ಯಾಹ್ನ 12.30ಕ್ಕೆ ಸರಕಾರಿ ಕಚೇರಿಗಳು ಮುಚ್ಚಬೇಕಾಗಿದ್ದು, 1.15ಕ್ಕೆ ಶುಕ್ರವಾರದ ವಿಶೇಷ ಪ್ರಾರ್ಥನೆಯಾಗಿರುವ ಜುಮುಆ ನಮಾಝ್ ನಿರ್ವಹಣೆಗೆ ಸಮಯ ನಿಗದಿಪಡಿಸಲಾಗಿದೆ. ಇದು ಎಲ್ಲಾ ಸ್ಥರದ ಕಾರ್ಮಿಕರಿಗೆ ಮತ್ತು ಉದ್ಯೋಗಿಗಳಿಗೆ ಪೂರಕ ಅವಕಾಶ ಕಲ್ಪಿಸಿದಂತಾಗಿದೆ
UAEಯಲ್ಲಿ ವಾರದ ರಜಾದಿನ ಬದಲಾವಣೆಯಾಗಿಲ್ಲ ಎಂಬ ಊಹಾಪೋಹ
ಇದೇ ವೇಳೆ UAEಯಲ್ಲಿ ವಾರದ ರಜೆಯಲ್ಲಿ ಬದಲಾವಣೆಯಾಗಿಲ್ಲ ಎಂದು ‘ಖಲೀಜ್ ಟೈಮ್ಸ್’ ವರದಿಯೊಂದನ್ನು ಉಲ್ಲೇಖಿಸಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹಗಳನ್ನು ಹರಿಯಬಿಟ್ಟಿದ್ದರು. ವಾಸ್ತವದಲ್ಲಿ ಇದು ಮೇ 2021ರ ಸುದ್ದಿಯಾಗಿದೆ. ಆಗ ‘ಖಲೀಜ್ ಟೈಮ್ಸ್’ ಯುಎಇಯಲ್ಲಿ ವಾರದ ರಜೆಯಲ್ಲಿ ಬದಲಾವಣೆ ಎಂಬ ಸಾಮಾಜಿಕ ಜಾಲತಾಣದ ಸುದ್ದಿಗಳನ್ನು ನಿರಾಕರಿಸಿ ವರದಿ ಮಾಡಿತ್ತು. ಪತ್ರಿಕೆ ತನ್ನ ಮೇ ತಿಂಗಳ ವರದಿಯಲ್ಲಿ ಹೊಸ ಉಲ್ಲೇಖವೊಂದನ್ನು ಮಾಡಿ, “ಇದು ಹಳೆಯ ಸುದ್ದಿಯಾಗಿದೆ, ವಾರದ ರಜಾದಿನದ ಬದಲಾವಣೆಯ ಹೊಸ ಸುದ್ದಿಯನ್ನು ಓದಿ” ಎನ್ನುತ್ತಾ ಹೊಸತೊಂದು ಲಿಂಕನ್ನು ಹಾಕಿತ್ತು.