ಯುಎಇ | ಹೈದರಾಬಾದ್ ಮೂಲದ ಸಂತ್ರಸ್ತ ಮಹಿಳೆಯ ರಕ್ಷಣೆಗೆ ಮುಂದಾದ ಭಾರತೀಯ ರಾಯಭಾರಿ

Prasthutha|

ದುಬೈ: ಯುಎಇಯ ಅಜ್ಮಾನ್’ನಲ್ಲಿ ಸಿಲುಕಿರುವ ಹೈದರಾಬಾದ್ ಮೂಲದ ಸಂತ್ರಸ್ತ ಮಹಿಳೆ ಅಸ್ರಾ ಫಾತಿಮಾ ಅವರ ರಕ್ಷಣೆಗೆ ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಧಾವಿಸಿದೆ.
ಅಜ್ಮಾನ್’ನಲ್ಲಿರುವ ಭಾರತೀಯ ಸಂಸ್ಥೆಯ ದೂರವಾಣಿ ಸಂಖ್ಯೆಯನ್ನು ನೀಡಿ, ಅವರನ್ನು ಸಂಪರ್ಕಿಸುವಂತೆ ಸೂಚಿಸಿದೆ.

- Advertisement -

ಪ್ರಕರಣದ ಬೆಳವಣಿಗೆಯ ಮಾಹಿತಿಯನ್ನು ರಾಯಭಾರಿ ಕಚೇರಿ ಮೂಲಗಳು ಕಲೆಹಾಕುತ್ತಿದೆ. ಅಲ್ಲದೆ ಮಹಿಳೆಗೆ ಸೂಕ್ತ ರೀತಿಯಲ್ಲಿ ನೆರವಾಗುವುದಾಗಿ ಕುಟುಂಬಕ್ಕೆ ಭರವಸೆ ನೀಡಿದೆ.

ಏನಿದು ಪ್ರಕರಣ?

- Advertisement -

28 ವರ್ಷದ ಅಸ್ರಾ ಫಾತಿಮಾ ಎಂಬವರು 2021ರ ಡಿಸೆಂಬರ್’ನಲ್ಲಿ ಮನೆಕೆಲಸದ ವೀಸಾದಲ್ಲಿ ದುಬೈಗೆ ಹೋಗಿದ್ದರು. ಆ ಬಳಿಕ ಅವರು ಯುಎಇ ನಲ್ಲಿರುವ ಅಲ್ ಐನ್ ಎಂಬಲ್ಲಿ ಅರಬ್ ಕುಟುಂಬವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಕುಟುಂಬದ ಮನೆಯಲ್ಲಿ ಎಂಟು ತಿಂಗಳು ಉಳಿದಿದ್ದ ಆಕೆಗೆ ಸರಿಯಾದ ಆಹಾರ ಮತ್ತು ವಸತಿ ವ್ಯವಸ್ಥೆಯನ್ನು ನಿರಾಕರಿಸಲಾಗಿತ್ತು. ಇದರಿಂದಾಗಿ ಆಕೆ ತೀವ್ರ ರೀತಿಯ ಅನಾರೋಗ್ಯಕ್ಕೀಡಾಗಿದ್ದರು ಎಂದು ತಿಳಿದುಬಂದಿದೆ.

ಈ ರೀತಿಯ ಸಂಕಷ್ಟವನ್ನು ಸಹಿಸಲಾಗದೆ ಆಕೆ ತಾಯ್ನಾಡಿಗೆ ಮರಳಲು ನಿರ್ಧರಿಸಿದ್ದು, ಆದರೆ ಆಕೆಯನ್ನು ಮನೆಯಿಂದ ಹೊರಹೋಗದಂತೆ ಮಾಲೀಕ ತಡೆದು ನಿಲ್ಲಿಸಿದ್ದಾನೆ. ಅಲ್ಲದೆ, ಆಕೆಗೆ ಪಾಸ್ ಪೋರ್ಟ್ ಹಿಂದಿರುಗಿಸಲು 10 ಸಾವಿರ ದಿರ್ಹಮ್ಸ್ ಅನ್ನು ನೀಡುವಂತೆ ಒತ್ತಾಯಿಸಿದ್ದಾನೆ.

ಈ ಮಧ್ಯೆ ತನ್ನ ಅಸಹಾಯಕತೆಯನ್ನು ಆಕೆ, ತನಗೆ ಕೆಲಸ ಕೊಡಿಸಿದ ದುಬೈ ಮೂಲದ ಮಹಿಳಾ ಏಜೆಂಟರಿಗೆ ತಿಳಿಸಿದ್ದಾರೆ. ಈ ವೇಳೆ ಆಕೆಗೆ ನೆರವಾಗುವ ಬದಲು ಏಜೆಂಟರು ಆಕೆಯನ್ನು ನಾಲ್ಕು ದಿನಗಳ ಕಾಲ ಅನ್ನ ಆಹಾರವಿಲ್ಲದೆ ಕೋಣೆಯಲ್ಲಿ ಕೂಡಿ ಹಾಕಿದ್ದರು. ಅದೃಷ್ಟವಶಾತ್ ಸಂತ್ರಸ್ತೆ ಅಲ್ಲಿಂದ ತಪ್ಪಿಸಿಕೊಂಡು ಅಜ್ಮಾನ್ ನಲ್ಲಿರುವ ಸ್ನೇಹಿತೆಯ ಮನೆಗೆ ಬಂದಿದ್ದಾಳೆ ಎಂದು ತಿಳಿದುಬಂದಿದೆ.

ಅಸ್ರಾ ಅವರ ಚಿಕ್ಕಮ್ಮ ಗೌಸಿಯಾ ಬೇಗಂ ಅವರು ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಮಜ್ಲಿಸ್ ಬಚಾವೋ ತೆಹ್ರೀಕ್ ನಾಯಕ ಅಮ್ಜದ್ ಉಲ್ಲಾ ಖಾನ್ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಈ ವಿಚಾರವನ್ನು ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತವಾದ ಅಧಿಕಾರಿಗಳು ಯುಎಇಯಲ್ಲಿ ಸಿಲುಕಿರುವ ಮಹಿಳೆಯನ್ನು ರಕ್ಷಿಸುವ ಪ್ರಕ್ರಿಯೆ ಪ್ರಾರಂಭಿಸಿದೆ.



Join Whatsapp