ಮೀಸಲಾತಿಯನ್ನು ವಿರೋಧಿಸಿದವರು ಹೇಗೆ ದಲಿತ ಪರವಾಗಿರಲು ಸಾಧ್ಯ: ಬಿಜೆಪಿಗೆ ಸಿದ್ದರಾಮಯ್ಯ

Prasthutha|

►ಬಿಜೆಪಿಯವರದ್ದು ಸುಳ್ಳು ಹೇಳುವ ಸಂಕಲ್ಪದ ಯಾತ್ರೆ

- Advertisement -

►ಅಂಕಿಅಂಶಗಳೊಂದಿಗೆ ಚರ್ಚೆಗೆ ಬನ್ನಿ, ಉತ್ತರಕುಮಾರರಂತೆ, ವಿದೂಷಕರಂತೆ ವರ್ತಿಸುವುದನ್ನು ನಿಲ್ಲಿಸಿ

ಬೆಂಗಳೂರು: ಬಿಜೆಪಿಯವರದ್ದು ಜನಸಂಕಲ್ಪ ಯಾತ್ರೆಯಲ್ಲ, ಸುಳ್ಳು ಹೇಳುವ ಸಂಕಲ್ಪದ ಯಾತ್ರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

- Advertisement -

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ನಾಯಕರು ತಮ್ಮ ವಿರುದ್ಧ ಮಾಡಿರುವ ಅರೋಪಗಳಿಗೆ ಸಿದ್ದರಾಮಯ್ಯ ಅವರು ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿಯವರು ಅವರ ಯಾತ್ರೆಗಳಲ್ಲಿ ನನ್ನನ್ನು ಗುರಿಯಾಗಿಸಿಕೊಂಡು ಸುಳ್ಳುಗಳನ್ನು ಹೇಳಿದ್ದಾರೆ. ನೀವು ಏನು ಹೇಳುವುದಿದ್ದರೂ ಅಂಕಿ ಅಂಶಗಳನ್ನು ಇಟ್ಟುಕೊಂಡು ಮಾತನಾಡಿದರೆ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಮತ್ತು ಯಡಿಯೂರಪ್ಪ ಇಬ್ಬರಿಗೂ ಒಂದಿಷ್ಟು ತೂಕ ಬರುತ್ತದೆ. ತಮ್ಮ ಸ್ಥಾನದ ಘನತೆಗಳನ್ನು ನಿರ್ಲಕ್ಷಿಸಿ ಮಾತನಾಡುತ್ತಾ ಹೋದರೆ ರಾಜ್ಯದ ಜನ ಬಿಜೆಪಿಯವರನ್ನು ವಿದೂಷಕರು ಎನ್ನುತ್ತಾರೆ ಎಂದು ಕುಟುಕಿದರು.

ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ಸಿಗೆ ಹಿಂದುಳಿದ ವರ್ಗದವರು, ದೀನ ದಲಿತರು ನೆನಪಾಗಲಿಲ್ಲ ಎಂದು ಬೊಮ್ಮಾಯಿಯವರು ರಾಯಚೂರಿನಲ್ಲಿ ಹೇಳಿದ್ದಾರೆ.  2013 ರಿಂದ 2018 ರವರೆಗೆ ಕಾಂಗ್ರೆಸ್ ಸರ್ಕಾರ ದಲಿತರು ಮತ್ತು ಹಿಂದುಳಿದ ಸಮುದಾಯಗಳಿಗೆ ಏನು ಮಾಡಿತ್ತು ಎಂದು ಕಡತಗಳನ್ನು ತರಿಸಿಕೊಂಡು ನೋಡಿ ಮಾತನಾಡಬೇಕೇ ಹೊರತು  ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿರುವುದು ಸುಳ್ಳು ಹೇಳುವುದಕ್ಕಲ್ಲ. ಮುಖ್ಯಮಂತ್ರಿಯವರಾದಿಯಾಗಿ ಬಹುತೇಕ ಬಿಜೆಪಿಯವರು ತಾವು ಆರೆಸ್ಸೆಸ್ಸಿಗರು ಎಂದು ಹೇಳಿಕೊಳ್ಳಲಾರಂಭಿಸಿದ್ದಾರೆ. ಬೊಮ್ಮಾಯಿ, ಯಡಿಯೂರಪ್ಪ ಮುಂತಾದವರೆಲ್ಲ ಆರೆಸ್ಸೆಸ್ ಎಂದು ಹೇಳಿಕೊಳ್ಳುತ್ತಿರುವುದು ದೇಶದ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಬ್ರಹ್ಮಾಂಡ ಭ್ರಷ್ಟಾಚಾರದ ಹೊಲಸನ್ನು ಮೆತ್ತಿಕೊಂಡವರು, ಜನರನ್ನು ಕೊಂದು ಅಧಿಕಾರಕ್ಕೆ ಏರಿದ ಎಲ್ಲ ಬಿಜೆಪಿಗರು ಆರೆಸ್ಸೆಸ್ ಎಂದು ಬೇಗ ಘೋಷಿಸಿಕೊಂಡಷ್ಟೂ ಒಳ್ಳೆಯದೆಂದು ನಾಡಿನ ಬಗ್ಗೆ ಕಾಳಜಿ ಇರುವ ಜನ ಬಯಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಬೊಮ್ಮಾಯಿಯಂಥವರು ಅದು ಯಾವ ಬಾಯಿಯಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಗಳು ದೇಶಭಕ್ತಿಯ ಪರವಾಗಿವೆ ಎಂದು ಹೇಳುತ್ತಾರೆ? ಸಂವಿಧಾನವನ್ನು, ರಾಷ್ಟ್ರಧ್ವಜವನ್ನು, ರಾಷ್ಟ್ರಗೀತೆಯನ್ನು ವಿರೋಧಿಸಿದವರು, ರಾಷ್ಟ್ರಪಿತನನ್ನು ಕೊಂದವರು, ವೇಷ ಮರೆಸಿಕೊಂಡು ತಮ್ಮದೆ ಜನರ ವಿರುದ್ಧ ಹಿಂಸೆ ಮಾಡಿದವರು ಅದು ಹೇಗೆ ರಾಷ್ಟ್ರ ಭಕ್ತರಾಗಲು ಸಾಧ್ಯ? ಎಂದು ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಮೀಸಲಾತಿಯನ್ನು ವಿರೋಧಿಸಿದವರು, ದಲಿತ- ಹಿಂದುಳಿದ ಸಮುದಾಯದ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನ ನಿಲ್ಲಿಸಿದವರು, ಈ ಸಮುದಾಯಗಳ ಜನರಿಗೆ ಮನೆಗಳನ್ನು ನೀಡದವರು, ಉದ್ಯೋಗ ನೀಡದವರು, ಸಮರ್ಪಕವಾಗಿ ಜನರಿಗೆ ಅನ್ನ ನೀಡದ ಬಿಜೆಪಿಯವರು ಅದು ಹೇಗೆ ಹಿಂದುಳಿದವರ, ದಲಿತರ ಪರವಾಗಿದ್ದೇವೆಂದು ಹೇಳಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ದೇಶದಲ್ಲಿ ಸಂವಿಧಾನವನ್ನು ಜಾರಿಗೆ ತಂದು ದಲಿತ- ದಮನಿತರು ಹಾಗೂ ಸರ್ವಜನಾಂಗದ ಏಳಿಗೆಗೆ ಕಾರಣರಾಗಿದ್ದು ಕಾಂಗ್ರೆಸ್ ಪಕ್ಷ.  2013 ರಿಂದ ಈಚೆಗೆ ರಾಜ್ಯದಲ್ಲಿ ನಾವು ಬಡ್ತಿ ಮೀಸಲಾತಿ ತಂದೆವು. ಎಸ್ ಸಿಪಿ, ಟಿಎಸ್ ಪಿ ಕಾಯ್ದೆಯನ್ನು ಜಾರಿಗೆ ತಂದು ಅನುದಾನಗಳನ್ನು ಕಾದಿರಿಸುವ ಕಾಯ್ದೆ ತಂದೆವು. ಗುತ್ತಿಗೆಗಳಲ್ಲಿ ಮೀಸಲಾತಿ ತಂದೆವು. ಆದರೆ ಬಿಜೆಪಿ ಏನು ಮಾಡಿದೆ? ಎಸ್ ಸಿಪಿ ಮತ್ತು ಟಿಎಸ್ ಪಿ ಅನುದಾನಗಳನ್ನು ಅನ್ಯ ಉದ್ದೇಶಗಳಿಗೆ ಖರ್ಚು ಮಾಡಿ ಆ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ. ಕಾಮಗಾರಿಗಳ  ಗುತ್ತಿಗೆಗಳಲ್ಲಿ ದಲಿತ ಸಮುದಾಯದವರಿಗೆ ನಾವು ಮೀಸಲಾತಿ ತಂದರೆ ಬೊಮ್ಮಾಯಿ ಸರ್ಕಾರ 2 ಕೋಟಿ ವರೆಗಿನ ಕಾಮಗಾರಿಗಳಿಗೆ ಟೆಂಡರ್ ಕೂಡ ಕರೆಯದೆ ಕೆಆರ್ ಡಿಸಿಎಲ್ ನವರಿಗೆ ವಹಿಸುವ ನೀತಿ ತಂದಿದ್ದಾರೆ. ಇದರಿಂದಾಗಿ ದಲಿತ ಸಮುದಾಯಗಳ ಗುತ್ತಿಗೆದಾರರಿಗೆ ಕಾಮಗಾರಿಗಳು ಸಿಗುತ್ತಿಲ್ಲ. ಇಂಥ ದಲಿತ ವಿರೋಧಿ ನೀತಿಗಳಿಗೆ ಏನೆನ್ನಬೇಕು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ನನ್ನ 5 ವರ್ಷಗಳ ಆಡಳಿತದಲ್ಲಿ  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಒಂದರಿಂದಲೆ 10500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೆವು. ಆದರೆ ಯಡಿಯೂರಪ್ಪ ಮತ್ತು ಬೊಮ್ಮಾಯಿಯವರ ಸರ್ಕಾರ ಸೇರಿ ಮಾರ್ಚ್ವರೆಗೆ ಖರ್ಚು ಮಾಡಿದ್ದು ಕೇವಲ 5700 ಕೋಟಿ ಮಾತ್ರ. ಈ ವರ್ಷ 2371 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವುದಾಗಿ ಹೇಳಿದ್ದಾರೆ. ಇದು ಹಿಂದುಳಿದ ವರ್ಗಗಳನ್ನು ಉದ್ಧಾರ ಮಾಡುವ ರೀತಿಯೆ? ದಲಿತ ಮತ್ತು ಹಿಂದುಳಿದ ವರ್ಗಗಳ ಮಕ್ಕಳು ವಿದೇಶಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಿ ಬರಲು ಅರಿವು  ಎಂಬ ಯೋಜನೆ ತಂದಿದ್ದೆವು. ಇದರಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳ ಎಷ್ಟು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದೀರಿ ಎಂಬ ಅಂಕಿ ಅಂಶ ಮಂಡಿಸಿ. ನನಗಿರುವ ಮಾಹಿತಿಯಂತೆ ಒಬ್ಬ ವಿದ್ಯಾರ್ಥಿಗೂ ಅವಕಾಶ ಮಾಡಿಕೊಟ್ಟಿಲ್ಲ ಎಂದು ಸವಾಲು ಹಾಕಿದ್ದಾರೆ.

ನಮ್ಮ ಸರ್ಕಾರದ ಅವಧಿಯಲ್ಲಿ ದಲಿತ ಹಿಂದುಳಿದ ವರ್ಗಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1471 ವಿದ್ಯಾರ್ಥಿ ನಿಲಯ, ವಸತಿ ಶಾಲೆಗಳನ್ನು ಕಟ್ಟಿದ್ದೆವು. 15 ಲಕ್ಷ ಮನೆಗಳನ್ನು ನಿರ್ಮಿಸಿದ್ದೆವು. ಅಸಂಖ್ಯಾತರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಿ ವಿದ್ಯುತ್ ಸಂಪರ್ಕ ನೀಡಿದ್ದೆವು.  ಈ ವರ್ಗದವರಿಗೆ ಸಾಲ ಸೌಲಭ್ಯ, ಉದ್ಯೋಗಗಳನ್ನು ಒದಗಿಸಿಕೊಡಲು ಒತ್ತು ನೀಡಿದ್ದೆವು.  ನಾನು ಅಂಕಿ ಅಂಶಗಳ ಮೂಲಕ ಚರ್ಚೆಗೆ ಸಿದ್ಧನಿದ್ದೇನೆ. ಬಿಜೆಪಿಯವರೂ ಅಂಕಿಅಂಶಗಳೊಂದಿಗೆ ಚರ್ಚೆಗೆ ಬರಲಿ. ಅದು ಬಿಟ್ಟು ಉತ್ತರಕುಮಾರರಂತೆ, ವಿದೂಷಕರಂತೆ ವರ್ತಿಸುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.

ಬೊಮ್ಮಾಯಿಯವರು ಹೋದ ಕಡೆಯಲ್ಲೆಲ್ಲ ಹಾಸಿಗೆ, ದಿಂಬುಗಳಲ್ಲಿ ಹಗರಣ ನಡೆದಿತ್ತು ಎನ್ನುತ್ತಾರೆ. ಹಗರಣದ ಬಗ್ಗೆ ತನಿಖೆಗೆ ವಹಿಸಿದ್ದವರು ಸಚಿವರಾಗಿದ್ದ ಆಂಜನೇಯನವರು. ಅರೋಪ ಇದ್ದದ್ದು ಅಧಿಕಾರಿಗಳ ಮೇಲೆ. ಆದರೆ ಬೊಮ್ಮಾಯಿಯವರು ಮಾಡಿದ್ದೇನು? ಅಧಿಕಾರಿಗಳನ್ನು ಆರೋಪ ಮುಕ್ತ ಮಾಡಿದ್ದಾರೆ.  ಹಾಗಿದ್ದರೂ ಬಾಯಿ ಚಪಲಕ್ಕೆ ಮತ್ತು ಸುಳ್ಳು ಹೇಳಬೇಕೆಂಬ ಉದ್ದೇಶದಿಂದ  ಈ ಮಾತುಗಳನ್ನು ಹೇಳುತ್ತಿದ್ದಾರೆ.

ಸಿದ್ದರಾಮಯ್ಯನವರ ಹಿಂದೆ ಈಗ ಹಿಂದುಳಿದವರೂ ಇಲ್ಲ, ದಲಿತರೂ ಇಲ್ಲ. ಈಗ ಅವರ ಹಿಂದೆ ಕೇವಲ ಅಲ್ಪಸಂಖ್ಯಾತರು ಮಾತ್ರ ಉಳಿದು ಬಿಟ್ಟಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ. ನಾನೆಂದೂ ಜನರನ್ನು ನನ್ನ ಹಿಂದೆ ಇರುವವರು ಎಂದು ಭಾವಿಸಿಲ್ಲ. ನಾನು ನನ್ನ ಜನರ ನಡುವೆ ಇರುವವನು ಎಂದು ಭಾವಿಸಿದ್ದೇನೆ. ಜನರ ನಡುವೆ ಇರುವವರು ಯಾವತ್ತೂ ಏಕಾಂಗಿಗಳಲ್ಲ. ನಾನು ಜನರ ಮುಂದೆ ಇದ್ದೇನೆ ಎನ್ನುವವರು ಮಾತ್ರ ಏಕಾಂಗಿಗಳಾಗುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಆ ಸಣ್ಣ ಹುಡುಗನ ಕೈಕೆಳಗೆ ಸೇವೆ ಮಾಡುತ್ತೀರ. ಅವರು ಓಡು ಎಂದರೆ ಓಡುತ್ತೀರಿ. ಕುಳಿತುಕೋ ಎಂದರೆ ಕುಳಿತುಕೊಳ್ಳುತ್ತೀರಿ. ಇದು ಸ್ವಾಭಿಮಾನದ ಸಂಕೇತವಲ್ಲ. ಅಧಿಕಾರಕ್ಕಾಗಿ ಏನೆಲ್ಲವನ್ನು ಮಾಡಲು ಸಿದ್ದರಾಗಿದ್ದೀರಿ ಎಂದು ರಾಹುಲ್ ಗಾಂಧಿಯ ಕುರಿತು ಬೊಮ್ಮಾಯಿ ಮತ್ತು ಯಡಿಯೂರಪ್ಪನವರು ಹೇಳಿದ್ದಾರೆ. ಬೊಮ್ಮಾಯಿಯವರೆ ಮತ್ತು ಯಡಿಯೂರಪ್ಪನವರೆ, ತುಸು ಮಹಾಭಾರತವನ್ನು ನೆನಪಿಸಿಕೊಳ್ಳಿ. ಪಾಂಡವರ ರಾಜಸೂಯಯಾಗದ ಸಂದರ್ಭದಲ್ಲಿ ಮಹಾಕ್ಷತ್ರಿಯ ಭೀಷ್ಮಾಚಾರ್ಯ ಮತ್ತು ಮಹಾಬ್ರಾಹ್ಮಣ ದ್ರೋಣಾಚಾರ್ಯ ಎಂಬ ಅತಿರಥ ಮಹಾರಥರಿದ್ದರೂ ಕೂಡ ಸಣ್ಣ ವಯಸ್ಸಿನ ಹುಡುಗ ಕೃಷ್ಣನಿಗೆ ಅಗ್ರ ಪೂಜೆ ಸಲ್ಲಬೇಕೆಂದು ಸೂಚಿಸಿ ಅದನ್ನು ಕಾರ್ಯಗತಗೊಳಿಸುತ್ತಾರೆ. ಆಗಲೂ ಶಿಶುಪಾಲನಂಥವರು ಸುಳ್ಳು ಕ್ಯಾತೆ ತೆಗೆದು ಒಂದೆ ಸಮ ನಿಂದಿಸಿ ನಿರ್ನಾಮವಾದ. ಆಗಲೂ ಶಿಶುಪಾಲ ನಮ್ಮ ಪಶುಪಾಲಕರ ನಾಯಕ ಕೃಷ್ಣನನ್ನು ತುಸು ಹೆಚ್ಚೂ ಕಡಿಮೆ ಬಚ್ಚಾ, ಹುಡುಗ ಎಂದು ಟೀಕಿಸಿದ್ದ. ರಾಹುಲ್ ಗಾಂಧಿಯವರ ವಿಚಾರದಲ್ಲಿ ನೀವು ಮಾಡುತ್ತಿರುವುದೂ ಅದನ್ನೆ. ಕಳೆದ 8 ವರ್ಷಗಳಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದವರು ಸೇರಿ  ಶಿಶುಪಾಲನ ಪಾತ್ರ ವಹಿಸಿಕೊಂಡೆ ಬಂದಿದ್ದೀರಿ. ನಿಮ್ಮ ಪಾಪದ ಕೊಡ ತುಂಬುವ ಹಂತಕ್ಕೆ ಬಂದಿದೆ. ಬಿಜೆಪಿಯ ಅಂತ್ಯ ಸಮೀಪಿಸಿದೆ. ರಾಹುಲ್ ಗಾಂಧಿಯವರಾಗಲಿ ನಾನಾಗಲಿ ಪಾದಯಾತ್ರೆ ನಡೆಸುತ್ತಿರುವುದು ಅಧಿಕಾರಕ್ಕಾಗಿ ಅಲ್ಲ.  ಬಿಜೆಪಿಯವರ ದುರಾಡಳಿತದಿಂದ ದೇಶವನ್ನು ಸಂರಕ್ಷಿಸಲು. ಪಾದಯಾತ್ರೆಯೊಂದು ಪವಿತ್ರ ಯಾತ್ರೆ. ನಾನು ನವೆಂಬರ್ನಿಂದ ರಥಯಾತ್ರೆ ಪ್ರಾರಂಭಿಸುತ್ತೇನಲ್ಲ ಅದನ್ನು  ಬೇಕಿದ್ದರೆ ರಾಜಕೀಯ ಯಾತ್ರೆ ಎನ್ನಿ ಒಪ್ಪುತ್ತೇನೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಯಡಿಯೂರಪ್ಪನವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಿದ್ದರಾಮಯ್ಯನವರಿಗೆ ಮೋದಿಯವರ ಕಾಲಿನಡಿ ಕುಳಿತುಕೊಳ್ಳುವ ಯೋಗ್ಯತೆಯೂ ಇಲ್ಲ ಅಂದಿದ್ದಾರೆ. ಅಂಥ ಗುಲಾಮಗಿರಿಯ ಯೋಗ್ಯತೆ ಯಡಿಯೂರಪ್ಪನಂಥವರಿಗೆ ಇರಲಿ, ನನ್ನಂಥವರಿಗೆ ಅದು ಹೊಂದಾಣಿಕೆಯಾಗುವುದಿಲ್ಲ. ನಮ್ಮ ಪಕ್ಷದಲ್ಲಿ ಕಾಲ ಕೆಳಗೆ ಕುಳಿತುಕೊಳ್ಳುವ ಸಂಸ್ಕೃತಿ ಇಲ್ಲ. ನಾವು ಭುಜಕ್ಕೆ ಭುಜ ತಾಗಿಸಿ ನಡೆವ ಡೆಮಾಕ್ರಟಿಕ್ ಸಂಸ್ಕೃತಿಯವರು ಎಂದು ಯಡಿಯೂರಪ್ಪನವರ ಗಮನಕ್ಕೆ ತರಬಯಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕದ್ದೇನು ಕತೆ?

ಕಲ್ಯಾಣ ಕರ್ನಾಟಕಕ್ಕೆ 371 (ಜೆ) ವಿಶೇಷ ಸ್ಥಾನಮಾನ ಬಂದರೂ 5 ವರ್ಷ ಒಂದೇ ಒಂದು ನೇಮಕಾತಿ ಮಾಡಲಿಲ್ಲ ಎಂದು ಬೊಮ್ಮಾಯಿಯವರು ಹೇಳಿದ್ದಾರೆ. ಬಿಜೆಪಿಯವರ ನಾಲಿಗೆ ಮತ್ತು ಮೆದುಳಿನ ನಡುವೆ ಸಂಪರ್ಕ ಇದೆಯಾ ಎಂಬುದೇ ನನ್ನ ಅನುಮಾನ.  ಯಾಕೆಂದರೆ ಮನಮೋಹನ್ ಸಿಂಗ್ ನೇತೃತ್ವದ ಯು.ಪಿ.ಎ. ಸರ್ಕಾರ 2012-13 ರಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು  371-ಜೆ ಅಡಿ ತಂದು ವಿಶೇಷ ಸ್ಥಾನಮಾನ ನೀಡಿತು. ಇದರಿಂದಾಗಿ ಈ ಭಾಗದ ಅಭಿವೃದ್ಧಿ ಒಂದು ಕಡೆಯಾದರೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸಿಕ್ಕಿದ್ದು, ಬಹಳ ದೊಡ್ಡ ಬದಲಾವಣೆ ಕಾರಣವಾಯಿತು. ವೈದ್ಯಕೀಯ, ಎಂಜಿನಿಯರಿಂಗ್ ಮುಂತಾದ ಕೋರ್ಸ್ಗಳಿಗೆ ಈ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು.

2013 ರಿಂದ 2018 ರವರೆಗೆ ನಾವು ಅಧಿಕಾರದಲ್ಲಿದ್ದಾಗ 36,000 ಜನ  ಈ ಭಾಗದ ಯುವಕ-ಯುವತಿಯರಿಗೆ ಉದ್ಯೋಗ ನೀಡಿದೆವು. ಅದರ ನಂತರ ಒಂದೂ ಉದ್ಯೋಗ ನೀಡಿಲ್ಲ. ಉದ್ಯೋಗ ನೀಡುತ್ತೇವೆಂದು ನೋಟಿಫಿಕೇಷನ್ ಮಾಡಿ ಸಬ್ ಇನ್ ಸ್ಪೆಕ್ಟರ್ ಹುದ್ದೆಗಳನ್ನು ಮಾರಾಟದ ಸರಕನ್ನಾಗಿಸಿ ಹರಾಜು ಕೂಗಿದ್ದೆ ಬಿಜೆಪಿಯವರು ಈ ಭಾಗದ ಜನರಿಗೆ ನೀಡಿದ ಕೊಡುಗೆ. ಆ ಭಾಗದ ಯೂನಿವರ್ಸಿಟಿಗಳಲ್ಲಿ ನೂರಾರು ಹುದ್ದೆಗಳು ಖಾಲಿ ಇವೆ ಅವುಗಳನ್ನು ತುಂಬಿಲ್ಲ, ಶಿಕ್ಷಕರು, ಶಿಕ್ಷಕ ಹುದ್ದೆಗಳಿಗೆ ನೇಮಕಾತಿಯಾಗಿಲ್ಲ. ನಾವು ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದ ಸಾವಿರಾರು ಹುದ್ದೆಗಳನ್ನು ಭರ್ತಿ ಮಾಡದೆ ಬಾಕಿ ಉಳಿಸಿಕೊಳ್ಳಲಾಗಿದೆ. ಬಿ.ಜೆ.ಪಿ. ಸಾಧನೆ ಎಂದರೆ ಹೆಸರು ಬದಲಾಯಿಸಿದ್ದು ಮಾತ್ರ. ಬಸವಣ್ಣನವರ ಕರ್ಮಭೂಮಿಯಾದ ಬಸವಕಲ್ಯಾಣದಲ್ಲಿ ಅನುಭವ ಮಂಟಪ ಪ್ರಾರಂಭಿಸಲು ನಾವು ಪ್ರಕ್ರಿಯೆ ಶುರು ಮಾಡಿದ್ದೆವು ಅದನ್ನಿನ್ನೂ ಪೂರ್ಣಗೊಳಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿಯವರ ಈ ಸುಳ್ಳುಗಳು ಚುನಾವಣೆ ಮುಗಿವವರೆಗೆ ಹೀಗೆ ಇರುತ್ತವೆ. ಜನರಿಗೆ ಅರ್ಥವಾಗಿದೆ ಬಿಜೆಪಿಯವರ ಯಾತ್ರೆ ಸುಳ್ಳುಗಳ ಯಾತ್ರೆ ಎಂದು.  ರಾಜ್ಯದ ಜನರೂ ಮಾರಿ ಹಬ್ಬ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ ಎಂಬುದು ಬೊಮ್ಮಾಯಿ ಮತ್ತು ಯಡಿಯೂರಪ್ಪನವರಿಗೆ ಬೇಗ ಅರ್ಥವಾದರೆ ಒಳ್ಳೆಯದು ಎಂದು ಸಿದ್ದರಾಮಯ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp