ಬೆಂಗಳೂರು: ಸಂಯುಕ್ತ ಅರಬ್ ಸಂಸ್ಥಾನದ ಹೂಡಿಕೆದಾರರು ರಾಜ್ಯದಲ್ಲಿ ಭಾರೀ ಬಂಡವಾಳ ಹೂಡಲಿದ್ದು, ನವೆಂಬರಿನಲ್ಲಿ ಬೆಂಗಳೂರಿಗೆ ಬರುವ ನಿರೀಕ್ಷೆ ಇದೆ ಎಂದು ಐಟಿ, ಬಿಟಿ, ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ರಾಜ್ಯ ಸರಕಾರದ ನಿಯೋಗವು ದುಬೈಯಿಂದ ನಾಲ್ಕು ದಿನಗಳ ಪ್ರವಾಸವನ್ನು ಮುಗಿಸಿಕೊಂಡು ಬಂದ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹೂಡಿಕೆಗೆ ಕರ್ನಾಟಕವು ಪ್ರಶಸ್ತ ತಾಣವೆನ್ನುವುದು ಯುಎಇ, ಖತಾರ್, ಈಜಿಪ್ಟ್ ಮತ್ತು ಸೌದಿ ಅರೇಬಿಯಾದ ಉದ್ಯಮಿಗಳಿಗೆ ಮನದಟ್ಟಾಗಿದೆ. ಇದರ ಫಲವಾಗಿ ಬೆಂಗಳೂರಿನಲ್ಲಿ ಸದ್ಯದಲ್ಲೇ ಒಂದು ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ ವಿಶ್ವ ದರ್ಜೆಯ `ಡಿಸೈನ್ ಡಿಸ್ಟ್ರಿಕ್ಟ್’ ಮೈದಾಳಲಿದೆ. ಇದು ಗುಣಮಟ್ಟದಲ್ಲಿ ದುಬೈ ಕೇಂದ್ರಕ್ಕಿಂತಲೂ ಉತ್ಕೃಷ್ಟವಾಗಿರಲಿದೆ ಎಂದು ಅವರು ಮಾಹಿತಿ ನೀಡಿದರು.
ದುಬೈನ ಇಸ್ಲಾಮಿಕ್ ಇನ್ವೆಸ್ಟ್ಮೆಂಟ್ ಗ್ರೂಪ್ ಸಮೂಹವು ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಹಂತಹಂತವಾಗಿ 3,500 ಕೋಟಿ ರೂ. ಹೂಡಿಕೆ ಮಾಡಲಿದೆ. ಇದರ ಜತೆಗೆ ಈ ಸಮೂಹವು ಬೆಂಗಳೂರಿನಲ್ಲಿ ತನ್ನ ಕಚೇರಿಯನ್ನು ಸದ್ಯದಲ್ಲೇ ಆರಂಭಿಸಲಿದೆ. ಈ ಸಂಬಂಧದ ಒಡಂಬಡಿಕೆಗೆ ದುಬೈನಲ್ಲೇ ಅಂಕಿತ ಹಾಕಲಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.