ದುಬೈ: ಐಸಿಸಿ ಟಿ-20 ವಿಶ್ವಕಪ್
ಟೂರ್ನಿಯ ತನ್ನ ಎರಡನೇ ಅಭ್ಯಾಸ ಪಂದ್ಯದಲ್ಲೂ ಭಾರತ ಭರ್ಜರಿ ಗೆಲುವು ದಾಖಲಿಸಿದ್ದು, ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರುವ ಫೇವರಿಟ್ ತಂಡವೆಂಬ ಸ್ಪಷ್ಟ ಸಂದೇಶ ರವಾನಿಸಿದೆ.
ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ, ಆರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡವನ್ನು 9 ವಿಕೆಟ್‌ಗಳ ಅಂತರದಲ್ಲಿ ಭರ್ಜರಿಯಾಗಿಯೇ ಬಗ್ಗು ಬಡಿದಿದೆ.
ಟಾಸ್ ಗೆದ್ದು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ನಿಗದಿತ 20. ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 152 ರನ್ ಕಲೆಹಾಕಿತ್ತು. ಸವಾಲಿನ ಮೊತ್ತವನ್ನು ಬೆನ್ನತ್ತಿದ ಭಾರತ ಕೇವಲ ಕೆ.ಎಲ್.ರಾಹುಲ್ ವಿಕೆಟ್ ಕಳೆದುಕೊಂಡು 18ನೇ ಓವರ್’ನಲ್ಲಿ ಗೆಲುವಿನ ನಗೆ ಬೀರಿತು.
ಕ್ಯಾಪ್ಟನ್ ಕಮ್ ಓಪನರ್ ಆಗಿದ್ದ ರೋಹಿತ್ ಶರ್ಮಾ, 41 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್’ಗಳ ನೆರವಿನಿಂದ 60 ರನ್ ಗಳಿಸಿದ್ದ ವೇಳೆ ನಿವೃತ್ತಿಯಾದರು. ಕೆ.ಎಲ್ ರಾಹುಲ್ 39 ರನ್’ಗಳಿಸಿ ಔಟಾದರೆ ಸೂರ್ಯಕುಮಾರ್ ಯಾದವ್ 38 ಹಾಗೂ ಹಾರ್ದಿಕ್ ಪಾಂಡ್ಯ 14 ರನ್’ಗಳಿಸಿ ಅಜೇಯರಾಗುಳಿದರು.
ಆಸ್ಟ್ರೇಲಿಯಾ ಪರ ಎಂಟು ಮಂದಿ ಬೌಲಿಂಗ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ದರೂ ಕೇವಲ ಒಂದೇ ಒಂದು ವಿಕೆಟ್ ಪಡೆಯಲು ಮಾತ್ರ ಸಫಲರಾದರು.
ಆಸ್ಟ್ರೇಲಿಯಾ ಸವಾಲಿನ ಮೊತ್ತ
ಇನ್ನು ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಆರಂಭ ನೀರಸವಾಗಿತ್ತು.
ಕಳಪೆ ಫಾರ್ಮ್’ನಲ್ಲಿರುವ ಓಪನರ್ ಡೇವಿಡ್ ವಾರ್ನರ್, 1 ರನ್’ಗಳಿಸುವಷ್ಟರಲ್ಲೇ ಆರ್ ಅಶ್ವಿನ್ ಸ್ಪಿನ್ ಬಲೆಯಲ್ಲಿ ಸಿಲುಕಿ ಎಲ್’ಬಿಡಬ್ಲ್ಯೂ ಆದರು. ಬಳಿಕ ಬಂದ ಮಿಚೆಲ್ ಮಾರ್ಷ್ ಖಾತೆ ತೆರಯುವ ಮುನ್ನವೇ ಅಶ್ವಿನ್ ಬೌಲಿಂಗ್‌ನಲ್ಲಿ ರೋಹಿತ್ ಶರ್ಮಾ ಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು. 8 ರನ್ ಗಳಿಸಿದ್ದ ಕ್ಯಾಪ್ಟನ್ ಫಿಂಚ್ ವಿಕೆಟ್ ರವೀಂದ್ರ ಜಡೇಜಾ ಪಾಲಾಯಿತು.
ನಾಲ್ಕನೇ ವಿಕೆಟ್’ಗೆ ಜತೆಯಾದ ಸ್ಟೀವ್ ಸ್ಮಿತ್ ಹಾಗೂ ಮ್ಯಾಕ್ಸ್ ವೆಲ್ ಆಸ್ಟ್ರೇಲಿಯಾಗೆ ಸವಾಲಿನ ಮೊತ್ತ ಕಲೆ ಹಾಕುವಲ್ಲಿ ನೆರವಾದರು
ಮ್ಯಾಕ್ಸ್‌ವೆಲ್ ಬಳಿಕ, ಮಾರ್ಕಸ್ ಸ್ಟೊಯಿನಿಸ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ 25 ಎಸೆತದಲ್ಲಿ 41 ರನ್ ಗಳಿಸಿ, ಆಸ್ಟ್ರೇಲಿಯಾ ತಂಡವನ್ನು 150ರ ಗಡಿ ದಾಟಿಸಿದರು.
ಕೊಹ್ಲಿ ಬೌಲಿಂಗ್..!
ನಾಯಕನ ಜವಾಬ್ದಾರಿಯಿಲ್ಲದೆ ರಿಲ್ಯಾಕ್ಸ್ ಆಗಿದ್ದ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ದ ಎರಡು ಓವರ್ ಬೌಲಿಂಗ್ ಮಾಡಿ 12 ರನ್ ಬಿಟ್ಟುಕೊಟ್ಟರು. 2 ಓವರ್ ಎಸೆದ ಆರ್.ಅಶ್ವಿನ್ ಎರಡು ವಿಕೆಟ್ ಪಡೆದರು.
ಪ್ರಮುಖ ವೇಗಿಗಳಾದ ಜಸ್ಪ್ರಿತ್ ಬುಮ್ರಾ ಹಾಗೂ ಮುಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿತ್ತು.