ವಾಷಿಂಗ್ಟನ್: ಸುಮಾರು 50 ವರ್ಷಗಳಿಂದ ಜಾರಿಯಲ್ಲಿದ್ದ ಕಾನೂನುಬದ್ಧ ಗರ್ಭಪಾತದ ಹಕ್ಕನ್ನು (ರೋ ವರ್ಸಸ್ ವೇಡ್) ರದ್ದುಪಡಿಸುವ ಐತಿಹಾಸಿಕ ತೀರ್ಪನ್ನು ಅಮೆರಿಕ ಸುಪ್ರೀಂಕೋರ್ಟ್ ಪ್ರಕಟಿಸಿದೆ.
ಸುಪ್ರೀಂಕೋರ್ಟ್ ನ ಈ ತೀರ್ಪು ಮಹಿಳೆಯರ ಮಾನವ ಹಕ್ಕುಗಳು ಮತ್ತು ಲಿಂಗ ಸಮಾನತೆಗೆ ದೊಡ್ಡ ಹೊಡೆತ ಎಂದು ವಿಶ್ವಸಂಸ್ಥೆಯ ತಜ್ಞರು ಬಣ್ಣಿಸಿದ್ದಾರೆ.
ಈ ತೀರ್ಪು ಸಂಪ್ರದಾಯವಾದಿ ರಿಪಬ್ಲಿಕನ್ ಆಡಳಿತದ ರಾಜ್ಯಗಳಲ್ಲಿ ಮಹತ್ವದ ಪರಿಣಾಮಗಳನ್ನು ಬೀರಲಿದ್ದು, ಕೆಲ ವಿಶೇಷ ಪ್ರಕರಣಗಳನ್ನು ಹೊರತುಪಡಿಸಿ ತಕ್ಷಣದಿಂದಲೇ ಗರ್ಭಪಾತವನ್ನು ನಿಷೇಧಿಸಲು ಕಾರಣವಾಗಲಿದೆ.
ಸೈದ್ಧಾಂತಿಕ ಹಿನ್ನೆಲೆಯಲ್ಲಿ ಈ ಮಹತ್ವದ ತೀರ್ಪು ಬಂದಿದ್ದು, ಸುಪ್ರೀಂಕೋರ್ಟ್ ಐದು ಮಂದಿ ಪುರುಷ ನ್ಯಾಯಮೂರ್ತಿಗಳು ಸೇರಿದಂತೆ ಆರು ಮಂದಿ ಸಂಪ್ರದಾಯವಾದಿ ನ್ಯಾಯಮೂರ್ತಿಗಳು ತೀರ್ಪಿನ ಪರ ಮತ ಚಲಾಯಿಸಿದ್ದಾರೆ. ಈ ಮೂಲಕ ಗರ್ಭಪಾತದ ಹಕ್ಕಿನ ಸಂವಿಧಾನ ಬದ್ಧತೆ ರದ್ದಾಗಲಿದೆ.
ಇಬ್ಬರು ಮಹಿಳಾ ನ್ಯಾಯಮೂರ್ತಿಗಳು ಸೇರಿದಂತೆ ಮೂವರು ಉದಾರವಾದಿ ನ್ಯಾಯಮೂರ್ತಿಗಳು ತೀರ್ಪಿಗೆ ವಿರೋಧ ವ್ಯಕ್ತಪಡಿಸಿದ್ದು, ಈ ತೀರ್ಪಿನ ಕಾರಣದಿಂದ ಲಕ್ಷಾಂತರ ಅಮೆರಿಕನ್ ಮಹಿಳೆಯರು ಇಂದು ತಮ್ಮ ಮೂಲಭೂತ ಸಂವಿಧಾನಾತ್ಮಕ ರಕ್ಷಣೆಯನ್ನು ಕಳೆದುಕೊಂಡಿದ್ದಾರೆ. ನಾವು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ನ್ಯಾಯಮೂರ್ತಿಗಳಾದ ಸ್ಟೀಫನ್ ಬ್ರೆಯರ್, ಸೋನಿಯಾ ಸೊಟೊಮೆಯರ್ ಮತ್ತು ಎಲೇನಾ ಕಗಾನ್ ಭಿನ್ನ ಅಭಿಪ್ರಾಯ ದಾಖಲಿಸಿದ್ದಾರೆ.
ಈ ನಿರ್ಧಾರವು ಅಮೆರಿಕದಾದ್ಯಂತ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯಕ್ಕೆ “ದೊಡ್ಡ ಹಿನ್ನಡೆ” ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥೆ ಮಿಶೆಲ್ ಬಾಚೆಲೆಟ್ ತಿಳಿಸಿದ್ದಾರೆ.