ಉ.ಪ್ರದೇಶ: ಹಲಾಲ್ ಉತ್ಪನ್ನಗಳ ತಯಾರಿ, ಮಾರಾಟ ನಿಷೇಧ

Prasthutha|

ಲಕ್ನೋ: ಉತ್ತರ ಪ್ರದೇಶದ ಸರಕಾರ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ತಯಾರಿ ಮತ್ತು ಅದರ ಮಾರಾಟವನ್ನು ರಾಜ್ಯಾದ್ಯಂತ ನಿಷೇಧಿಸಿ ಆದೇಶ ನೀಡಿದೆ‌. ಹಲಾಲ್ ಪ್ರಮಾಣೀಕೃತ ಆಹಾರ, ಔಷಧ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳನ್ನು ನಿಷೇಧಿಸಲಾಗಿದೆ. ಹಲಾಲ್ ಎಂಬುದು ನಿಯಮಗಳಿಗೆ ವಿರುದ್ಧವಾಗಿ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಸೂಚನೆ ಮೇರೆಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ನಿಷೇಧಿಸಿ ಅಧಿಸೂಚನೆ ಹೊರಡಿಸಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಆಯುಕ್ತೆ ಅನಿತಾ ಸಿಂಗ್ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದಾರೆ.

- Advertisement -

ಇನ್ನು ಮುಂದೆ ಯಾವುದೇ ವ್ಯಕ್ತಿ ಹಲಾಲ್ ಪ್ರಮಾಣೀಕೃತ ಆಹಾರ ಪದಾರ್ಥಗಳು, ಔಷಧಿಗಳು ಮತ್ತು ಸೌಂದರ್ಯವರ್ಧಕಗಳಿಗೆ ಬಳಸುವ ಇತರ ವಸ್ತುಗಳನ್ನು ತಯಾರಿಸುವುದು, ಸಂಗ್ರಹಿಸುವುದು, ಮಾರಾಟ ಮತ್ತು ಖರೀದಿಸುವುದು ಅಪರಾಧವಾಗಿ ಪರಿಗಣಿಸಲ್ಪಡಲಿದೆ. ಇಂತಹದ್ದು ಕಂಡುಬಂದಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ಮತ್ತು 10 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ನಕಲಿ ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆಯ ಪರವಾನಗಿ ರದ್ದುಪಡಿಸುವುದು ಮತ್ತು ನಕಲಿ ವಸ್ತುಗಳನ್ನು ಮಾರಾಟ ಮಾಡಿದರೆ ಜೀವಾವಧಿ ಶಿಕ್ಷೆ ಮತ್ತು 10 ಲಕ್ಷ ರೂ.ವರೆಗೆ ದಂಡ ವಿಧಿಸಲು ಈಗಿನ ಕಾನೂನಿನಲ್ಲಿ ಅವಕಾಶವಿದೆ. ರಾಜ್ಯದಲ್ಲಿ ತಯಾರಾಗಿ ಹಲಾಲ್ ಪ್ರಮಾಣ ಹೊಂದಿದ ಉತ್ಪನ್ನಗಳನ್ನು ನಕಲಿ ಅಥವಾ ಕಲುಷಿತ ಉತ್ಪನ್ನಗಳಾಗಿ ಪರಿಗಣಿಸಿ ಈ ಶಿಕ್ಷೆ ವಿಧಿಸಲಾಗುತ್ತದೆ ಎಂದು ಸರಕಾರ ತಿಳಿಸಿದೆ. ಇದರ ವಿರುದ್ಧ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಶೀಘ್ರವೇ ಜಿಲ್ಲೆಗಳಲ್ಲಿ ದಾಳಿ ಅಭಿಯಾನ ಆರಂಭಿಸಲಿದೆ ಎಂದೂ ತಿಳಿಸಲಾಗಿದೆ.

- Advertisement -

ರಫ್ತಿಗೆ ಯಾವುದೇ ನಿರ್ಬಂಧವಿಲ್ಲ

ಆದರೆ ಹಲಾಲ್ ಪ್ರಮಾಣೀಕೃತ ಆಹಾರ ಪದಾರ್ಥಗಳು, ಔಷಧಗಳು, ಇತರ ವೈದ್ಯಕೀಯ ವಸ್ತುಗಳು ಮತ್ತು ಸೌಂದರ್ಯವರ್ಧಕಗಳ ರಫ್ತಿಗೆ ಯಾವುದೇ ನಿರ್ಬಂಧವಿಲ್ಲ. ರಫ್ತುದಾರರು ಅದನ್ನು ಸುಲಭವಾಗಿ ರಫ್ತು ಮಾಡಬಹುದು ಎಂದೂ ತಿಳಿಸಲಾಗಿದೆ.




Join Whatsapp