ಟ್ರ್ಯಾಕ್ಟರ್​​ಗೆ ಹಿಂದಿನಿಂದ ಕಾರು ಡಿಕ್ಕಿ:ಇಬ್ಬರು ಸ್ಥಳದಲ್ಲೇ ಸಾವು

Prasthutha|

ಹಾವೇರಿ: ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರನ ದರ್ಶನಕ್ಕೆ ಹೊರಟಿದ್ದ ಟ್ರ್ಯಾಕ್ಟರ್​​ಗೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್​​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟು,ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶಿಗ್ಗಾಂವಿ ತಾಲೂಕಿನ ಹೊನ್ನಾಪುರ ಗ್ರಾಮದ ಬಳಿ ಸಂಭವಿಸಿದೆ.
ಹುಬ್ಬಳ್ಳಿ ತಾಲೂಕು ಶೆರೆವಾಡ ಗ್ರಾಮದ ಹನುಮಂತಪ್ಪ ಮೂಲಗಿ (54) ಹಾಗೂ ಚಂದ್ರು ಶಿರಕೋಳ (45) ಮೃತಪಟ್ಟವರು. ಶೆರೇವಾಡ ಗ್ರಾಮದಿಂದ ಟ್ರ್ಯಾಕ್ಟರ್​​ನಲ್ಲಿ ಹಾವೇರಿ ಗುತ್ತಲ ಮಾರ್ಗವಾಗಿ ಮೈಲಾರ ಜಾತ್ರೆಗೆ ಹೊರಟಿದ್ದರು.
ಹನುಮಂತಪ್ಪ, ಚಂದ್ರು ಸೇರಿದಂತೆ ಐದಾರು ಜನ ಟ್ರ್ಯಾಕ್ಟರ್​ ಟ್ರೇಲರ್ ಹಿಂಭಾಗದಲ್ಲಿ ಕಾಲು ಕೆಳಗೆ ಬಿಟ್ಟು ಕುಳಿತುಕೊಂಡು ಬರುತ್ತಿದ್ದರು. ಈ ವೇಳೆ ಹಿಂದಿನಿಂದ ಶರವೇಗದಲ್ಲಿ ಬಂದ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಟ್ರ್ಯಾಕ್ಟರ್​​ ಗುದ್ದಿದೆ.
ಕಾರು ಗುದ್ದಿದ ರಭಸಕ್ಕೆ ಟ್ರ್ಯಾಕ್ಟರ್​ನಲ್ಲಿದ್ದವರು ರಸ್ತೆ ಮೇಲೆ ಬಿದ್ದಿದ್ದಾರೆ. ಹನುಮಂತಪ್ಪ ಹಾಗೂ ಚಂದ್ರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ತಡಸ ಪೊಲೀಸರು ಧಾವಿಸಿ, ಗಾಯಾಳುಗಳನ್ನು ಆ್ಯಂಬುಲೆನ್ಸ್ ಮೂಲಕ ಕಿಮ್ಸ್‌ಗೆ ರವಾನಿಸಿದರು. ಕಾರಿನಲ್ಲಿದ್ದ ಇಬ್ಬರಿಗೂ ಗಾಯಗಳಾಗಿದ್ದು, ಟ್ರಾಕ್ಟರ್‌ನಲ್ಲಿದ್ದ ಗಾಯಾಳುಗಳ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Join Whatsapp