ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ: ಇಬ್ಬರು ಆರೋಪಿಗಳು ವಶಕ್ಕೆ

Prasthutha|

► ಶಿವನಮೂರ್ತಿ ಪ್ರತಿಷ್ಠಾಪನೆ ವಿವಾದವೇ ಕೃತ್ಯಕ್ಕೆ ಕಾರಣ

- Advertisement -

ಬೆಂಗಳೂರು: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆಯ ಎದುರು ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಇಬ್ಬರು ಕಿಡಿಗೇಡಿಗಳು ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ತನಿಖೆಯ ಆಳಕ್ಕಿಳಿದ ಪೊಲೀಸರು ಇಬ್ಬರ ಬದಲು ಮೂವರು ಕೃತ್ಯದಲ್ಲಿ ಭಾಗಿಯಾಗಿರುವುದು ದೃಢಪಟ್ಟಿದ್ದು ಅವರಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಬೇಗೂರು ಕೆರೆ ಮಧ್ಯೆ ಕೃತಕವಾಗಿ ನಿರ್ಮಿಸಿದ್ದ ಶಿವನಮೂರ್ತಿ ಪ್ರತಿಷ್ಠಾಪನೆ ಹಾಗೂ ಪೂಜೆ ವಿಚಾರದಲ್ಲಿ ಸತೀಶ್ ರೆಡ್ಡಿ ಮಧ್ಯಪ್ರವೇಶಿಸಿದ್ದೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.


ಶಾಸಕ ಸತೀಶ್ ರೆಡ್ಡಿಗೆ ಸೇರಿದ ಕಾರುಗಳನ್ನು ಬೆಂಕಿ ಇಡಲು ಸಂಚು ರೂಪಿಸಿದ ಆರೋಪಿಗಳು ಎಲ್ಲ ರೀತಿಯ ಯೋಜನೆ ಮಾಡಿಕೊಂಡಿದ್ದರು.ಬೇಗೂರು ಬಳಿಯ ಪೆಟ್ರೋಲ್ ಬಂಕ್ ವೊಂದರಲ್ಲಿ ಇಬ್ಬರು ದುಷ್ಕರ್ಮಿಗಳು ಬಂದು ಬೈಕ್ ನ ಜೊತೆಗೆ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿಕೊಂಡಿದ್ದಾರೆ. ಬಳಿಕ ಸತೀಶ್ ರೆಡ್ಡಿ ಮನೆ ಹಿಂಭಾಗದ ಗೇಟ್ ಹಾರಿ ಎರಡು ಕಾರುಗಳಿಗೆ ಪೆಟ್ರೋಲ್ ಎರಚಿ, ಬೆಂಕಿ ಇಟ್ಟು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದರು. ತಮ್ಮ ಬೈಕ್ ಬಗ್ಗೆ ಪೊಲೀಸರಿಗೆ ಗೊತ್ತಾಗದಂತೆ ಮನೆಗೆ ಬರುವ ಮುನ್ನ ಒಂದು ಕೀ.ಮೀ. ದೂರದಲ್ಲಿ ಬೈಕ್ ನಿಲ್ಲಿಸಿ ಪರಾರಿಯಾಗಿರುವುದು ಕಂಡುಬಂದಿದೆ.

- Advertisement -

ತನಿಖೆಗೆ 5 ತಂಡ ರಚನೆ
ಕೃತ್ಯ ನಡೆದ ಸುತ್ತಮುತ್ತಲ ಸುಮಾರು 200ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ನಡೆಸಿ‌ ಪ್ರಕರಣದ ಆರೋಪಿಗಳ ಪತ್ತೆಗಾಗಿ ಪ್ರತ್ಯೇಕ ಐದು ಪೊಲೀಸ್ ತಂಡ ರಚನೆ ಮಾಡಲಾಗಿತ್ತು.


ಬೇಗೂರು ಸುತ್ತಮುತ್ತಲಿನ ಸುಮಾರು 200ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿ ವಶಕ್ಕೆ ಪಡೆದುಕೊಂಡು ತಾಂತ್ರಿಕ ತನಿಖೆ ನಡೆಸಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಕೃತ್ಯದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಿದ ಬಳಿಕವಷ್ಟೇ ಸಂಪೂರ್ಣ ಮಾಹಿತಿ ಗೊತ್ತಾಗಲಿದೆ.

Join Whatsapp