ಟ್ವಿಟ್ಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ವಿರುದ್ಧ ಮತ್ತೊಂದು ಎಫ್ಐಆರ್

Prasthutha|

ಟ್ವಿಟ್ಟರ್ ಒಂದಲ್ಲ ಒಂದು ವಿಚಾರಕ್ಕೆ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದ್ದು, ಈ ಬಾರಿ ಭಾರತದ ಭೂಪಟವನ್ನು ತಪ್ಪಾಗಿ ಪ್ರಕಟಿಸಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಭಾರತದ ತಪ್ಪು ನಕ್ಷೆಯನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದಕ್ಕಾಗಿ ಟ್ವಿಟ್ಟರ್ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 505 (2) ಮತ್ತು ಐಟಿ (ತಿದ್ದುಪಡಿ) ಕಾಯ್ದೆ 2008 ರ ಸೆಕ್ಷನ್ 74 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -


ಜಮ್ಮು-ಕಾಶ್ಮೀರ ಒಂದು ಪ್ರತ್ಯೇಕ ದೇಶ ಮತ್ತು ಲಡಾಖ್ ಚೀನಾದ ಒಂದು ಭಾಗ ಎಂದು ಟ್ವಿಟ್ಟರ್ ಬಿಂಬಿಸಿತ್ತು ಎನ್ನಲಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲೂ ಭಾರೀ ಆಕ್ರೋಶ ವ್ಯಕ್ತವಾಗಿತ್ತು.


ವಿವಾದ ಉಂಟಾಗುತ್ತಿದ್ದಂತೆ ಭೂಪಟವನ್ನು ಟ್ವಿಟ್ಟರ್ ತೆಗೆದು ಹಾಕಿದೆ. ಭಾರತದ ಭೂಪಟವನ್ನು ತಪ್ಪಾಗಿ ತೋರಿಸಿದ ಟ್ವಿಟರ್ ಇಂಡಿಯಾ ವಿರುದ್ಧ ಉತ್ತರ ಪ್ರದೇಶದ ಭಜರಂಗ ದಳದ ನಾಯಕ ಪ್ರವೀಣ್ ಭಾಟಿ ಎಂಬುವರು ಬುಲಂದ್‌ಶಹರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಉತ್ತರಪ್ರದೇಶದಲ್ಲಿ ಮನೀಶ್ ಮಹೇಶ್ವರಿ ವಿರುದ್ಧ ದಾಖಲಾಗುತ್ತಿರುವ ಎರಡನೇ ಎಫ್ಐಆರ್ ಇದಾಗಿದೆ. ಕಳೆದ ವಾರ ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದ ಪೋಸ್ಟ್ ಶೇರ್ ಆದ ಬೆನ್ನಲ್ಲೇ ಮಹೇಶ್ವರಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು.

Join Whatsapp