ಆಕ್ಸಿಜನ್, ಜೀವರಕ್ಷಕ ಔಷಧಿಗಳ ಹಂಚಿಕೆಯಲ್ಲಿ ಒಕ್ಕೂಟ ಸರ್ಕಾರ ಕರ್ನಾಟಕಕ್ಕೆ ಅನ್ಯಾಯವೆಸಗಿತು. ಈಗ ಕೋವಿಡ್ ಲಸಿಕೆ ಹಂಚಿಕೆಯಲ್ಲೂ ತಾರತಮ್ಯ ಎಸಗುತ್ತಿದೆ. ಇದೆಲ್ಲ ಅನ್ಯಾಯಗಳನ್ನು ಖಂಡಿಸಲು ನಾಳೆ ಸಂಜೆ 5 ಗಂಟೆಗೆ ಕರ್ನಾಟಕ ರಕ್ಷಣಾ ವೇದಿಕೆ #ಲಸಿಕೆಯಲ್ಲೂಮೋಸ ಎಂಬ ಟ್ವಿಟರ್ ಅಭಿಯಾನ ನಡೆಸಲಿದೆ.
“ಪ್ರತಿಯೊಬ್ಬ ಕನ್ನಡಿಗರು ಇದರಲ್ಲಿ ಪಾಲ್ಗೊಳ್ಳಲು ನಾನು ಮನವಿ ಮಾಡುತ್ತಿದ್ದೇನೆ. ಕರ್ನಾಟಕಕ್ಕೆ ಪದೇ ಪದೇ ಅನ್ಯಾಯವಾಗುತ್ತಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಸ್ವರ್ಗ ಧರೆಗಿಳಿಯಲಿದೆ ಎಂದು ಹೇಳಿದ್ದರು. ಆದರೆ ಈಗ ಆಗುತ್ತಿರುವುದೇ ಬೇರೆ. ಅನ್ಯಾಯಗಳ ಕುರಿತು ಪ್ರಶ್ನೆ ಮಾಡುವ ಶಕ್ತಿಯೂ ರಾಜ್ಯ ನಾಯಕರಿಗಿಲ್ಲ. ಕನ್ನಡಿಗರು ಈಗಾಗಲೇ ನೊಂದಿದ್ದಾರೆ, ನರಳುತ್ತಿದ್ದಾರೆ. ನಮ್ಮ ತಾಳ್ಮೆಯ ಪರೀಕ್ಷೆ ಮಾಡಬೇಡಿ” ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ ಎ ನಾರಾಯಣ ಗೌಡ ಕಿಡಿ ಕಾರಿದ್ದಾರೆ.
ಆಕ್ಸಿಜನ್ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆದ ಅನ್ಯಾಯವನ್ನು ನಾವು ಕಣ್ಣಾರೆ ನೋಡಿದ್ದೇವೆ. ಜೀವಾನಿಲ ಸಿಗದೆ ನೂರಾರು ಮಂದಿ ರಾಜ್ಯದಲ್ಲಿ ಮೃತಪಟ್ಟರು. ಕೊನೆಗೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಗಳ ಮಧ್ಯಪ್ರವೇಶದಿಂದಾಗಿ ಒಂದಷ್ಟು ಆಕ್ಸಿಜನ್ ಲಭಿಸಿತು. ಒಕ್ಕೂಟ ಸರ್ಕಾರ ನ್ಯಾಯಾಲಯಗಳ ಆದೇಶವನ್ನೂ ಸರಿಯಾಗಿ ಪಾಲಿಸುತ್ತಿಲ್ಲ. ಆದರೂ ಇದನ್ನು ಕೇಳುವವರು ಇಲ್ಲದಂತಾಗಿದೆ. ಕೋವಿಡ್ ರೋಗಿಗಳಿಗೆ ಬಳಸಲಾಗುವ ರೆಮ್ಡಿಸಿವಿರ್ ಹಂಚಿಕೆಯಲ್ಲೂ ಗುಜರಾತ್, ಉತ್ತರಪ್ರದೇಶ ಇತ್ಯಾದಿ ರಾಜ್ಯಗಳಿಗೆ ಸಿಂಹಪಾಲು ನೀಡಿ ಕರ್ನಾಟಕವನ್ನು ವಂಚಿಸಲಾಯಿತು. ಈಗ ಬ್ಲಾಕ್ ಫಂಗಸ್ ರೋಗಿಗಳಿಗೆ ನೀಡಲಾಗುವ ಆಂಫೋಟೆರಿಸಿನ್ ಬಿ ಔಷಧಿ ಹಂಚಿಕೆಯಲ್ಲೂ ಅನ್ಯಾಯ ನಡೆಯುತ್ತಿದೆ. ಹಲವಾರು ಜಿಲ್ಲೆಗಳಿಗೆ ಈ ಔಷಧಿ ಸಿಗದೆ ರೋಗಿಗಳು ಸಾಯುತ್ತಿದ್ದಾರೆ. ಇದಕ್ಕೆ ಯಾರು ಹೊಣೆ? ಎಂದವರು ಪ್ರಶ್ನಿಸಿದ್ದಾರೆ.
ಮೇ.25ರ ಅಂತ್ಯಕ್ಕೆ ಒಕ್ಕೂಟ ಸರ್ಕಾರ ಕರ್ನಾಟಕಕ್ಕೆ ಶೇ.6.7ರಷ್ಟು ಕೋವಿಡ್ ಲಸಿಕೆ ಹಂಚಿಕೆ ಮಾಡಿದೆ. ಅದೇ ಸಂದರ್ಭದಲ್ಲಿ ಗುಜರಾತ್ ಗೆ ಶೇ. 7.91ರಷ್ಟು, ಉತ್ತರ ಪ್ರದೇಶಕ್ಕೆ 8.29ರಷ್ಟು ಲಸಿಕೆ ನೀಡಿದೆ. ಈ ತಾರತಮ್ಯ ಯಾಕೆ? ವ್ಯಾಕ್ಸಿನ್ ಹಂಚಿಕೆಯಲ್ಲಿ ಈ ಮಲತಾಯಿ ಧೋರಣೆ ಯಾಕೆ? ಒಕ್ಕೂಟ ಸರ್ಕಾರಕ್ಕೆ ಎಲ್ಲರ ಜೀವವೂ ಮುಖ್ಯವಲ್ಲವೇ? ಮೇ.1 ಕ್ಕೂ ಮುನ್ನ ಒಕ್ಕೂಟ ಸರ್ಕಾರವೇ ಲಸಿಕೆ ಹಂಚಿಕೆ ಮಾಡುತ್ತಿತ್ತು. ಕರ್ನಾಟಕದ ಒಟ್ಟು 40 ಲಕ್ಷಕ್ಕೂ ಹೆಚ್ಚು ಮಂದಿ 45ರ ವಯೋಮಿತಿ ಮೀರಿದವರಿಗೆ ಮೊದಲ ಲಸಿಕೆ ನೀಡಲಾಗಿತ್ತು. ಇವರಿಗೆ ಎರಡನೇ ಲಸಿಕೆ ನೀಡುವ ಹೊಣೆ ಒಕ್ಕೂಟ ಸರ್ಕಾರದ್ದಾಗಿತ್ತು. ಆದರೆ ಈಗ ರಾಜ್ಯ ಸರ್ಕಾರ 18 ವರ್ಷ ಮೀರಿದವರಿಗೆಂದು ಕೊಂಡುಕೊಂಡ ಲಸಿಕೆಯನ್ನೇ ಎರಡನೇ ಡೋಸ್ ಗೆ ಬಳಸಿದೆ. ಈ ಅನ್ಯಾಯವನ್ನು ಪ್ರಶ್ನಿಸುವವರು ಯಾರು? ಎಂದು ನಾರಾಯಣ ಗೌಡ ಅವರು ಸರಕಾರವನ್ನು ಪ್ರಶ್ನೆ ಮಾಡಿದ್ದಾರೆ.
ಮೇ.1 ರ ನಂತರ ರಾಜ್ಯ ಸರ್ಕಾರಗಳಿಗೂ ನೇರವಾಗಿ ಲಸಿಕೆ ಕೊಂಡುಕೊಳ್ಳುವ ಅವಕಾಶವನ್ನು ಒಕ್ಕೂಟ ಸರ್ಕಾರ ನೀಡಿದ ನಂತರ ಒಟ್ಟು ಮೂರು ಕೋಟಿ ಲಸಿಕೆಗಳಿಗೆ ಬೇಡಿಕೆ ನೀಡಲಾಗಿದೆ, ಹಣವನ್ನೂ ತೆಗೆದಿರಿಸಲಾಗಿದೆ. ಆದರೆ ರಾಜ್ಯ ಸರ್ಕಾರದ ಕೈ ಸೇರಿರುವುದು ಕೇವಲ 14 ಲಕ್ಷ ಲಸಿಕೆ ಮಾತ್ರ. ರಾಜ್ಯಕ್ಕೆ ಬರಬೇಕಾದ ಲಸಿಕೆಯನ್ನು ತಡೆಯುತ್ತಿರುವ ಕಾಣದ ಕೈಗಳು ಯಾವುವು? ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಲಸಿಕೆಗಳಿಗೆ ಇದ್ದ 100 ರೂಪಾಯಿಗಳ ಸೇವಾ ಶುಲ್ಕವನ್ನು ರಾಜ್ಯ ಸರ್ಕಾರ 300 ರುಪಾಯಿಗಳಿಗೆ ಹೆಚ್ಚಿಸಿದೆ. ಖಾಸಗಿ ಆಸ್ಪತ್ರೆಗಳ ಲಾಬಿಗೆ ರಾಜ್ಯ ಸರ್ಕಾರ ಮಣಿದಿರುವುದು ಸ್ಪಷ್ಟವಾಗಿದೆ. ಖಾಸಗಿ ಆಸ್ಪತ್ರೆಗಳು ಮನಸಿಗೆ ಬಂದ ದರಕ್ಕೆ ಲಸಿಕೆಯನ್ನು ನೀಡುತ್ತಿತ್ತು, ಲಸಿಕೆ ಹೆಸರಲ್ಲಿ ಹಗಲು ದರೋಡೆಯೇ ನಡೆಯುತ್ತಿದೆ.
ಕೋವಿಡ್ ಮೂರನೇ ಅಲೆ ಬರುವುದರೊಳಗೆ ರಾಜ್ಯದ ಎಲ್ಲ ನಾಗರಿಕರಿಗೂ ಲಸಿಕೆ ನೀಡಬೇಕಾಗಿರುವುದು ರಾಜ್ಯ ಮತ್ತು ಒಕ್ಕೂಟ ಸರ್ಕಾರದ ಹೊಣೆಗಾರಿಕೆಯಾಗಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಮೂರನೇ ಅಲೆಯಲ್ಲೂ ಅಮಾಯಕ ಜನರು ಸಾವಿಗೀಡಾಗುವ ಸಂಭವವಿದೆ. ಜನರ ಸಿಟ್ಟು ರಟ್ಟೆಗೆ ಬರುವ ಮುನ್ನ ಸರ್ಕಾರಗಳು ಎಚ್ಚೆತ್ತು ಎಲ್ಲರಿಗೂ ಲಸಿಕೆ ನೀಡಬೇಕು ಎಂದು ನಾರಾಯಣ ಗೌಡ ಅವರು ಸರಕಾರವನ್ನು ಆಗ್ರಹಿಸಿದ್ದಾರೆ.