ಮಂಗಳೂರಿಗೆ ಬಂದಿಳಿದ ಬಹ್ರೈನ್ ಆಕ್ಸಿಜನ್ | ಯುಟಿ ಖಾದರ್ ಮತ್ತು ವೇದವ್ಯಾಸ್ ಕಾಮತ್ ಮಧ್ಯೆ ಟ್ವಿಟ್ಟರ್ ವಾರ್!

Prasthutha|

►ಉಚಿತ ಆಕ್ಸಿಜನ್ ಮತ್ತು ಹಣಕ್ಕಾಗಿನ ಲಸಿಕೆ ರಫ್ತಿನ ಕುರಿತು ಬಿಬಿ ಬಿಸಿ ಚರ್ಚೆ

- Advertisement -

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿನ ಹೆಚ್ಚಳದಿಂದಾಗಿ ಜನತೆ ಕಂಗಾಲಾಗಿದ್ದು. ಈ ನಡುವೆ ಬಹ್ರೈನ್ ನಿಂದ ರಾಜ್ಯಕ್ಕೆ 40 ಮೆಟ್ರಿಕ್ ಟನ್ ಆಕ್ಸಿಜನ್ ಆಗಮನವಾಗಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯ ಶಾಸಕರಿಬ್ಬರ ನಡುವೆ ಟ್ವಿಟ್ಟರ್ ಸಮರ ಮುಂದುವರಿದಿದ್ದು, ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಆಕ್ಸಿಜನ್ ಬಳಸುವುದನ್ನು ಬಿಟ್ಟು ಬಿಜೆಪಿ ನಾಯಕರು ವಿದೇಶದಿಂದ ಬಂದ ಆಕ್ಸಿಜನ್ ಪಡೆದು ಸಂಭ್ರಮಿಸುತ್ತಿರುವ ಬಗ್ಗೆ ಬಿಜೆಪಿ ನಾಯಕರ ವಿರುದ್ಧ ಮಾಜಿ ಸಚಿವ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಯು.ಟಿ. ಖಾದರ್, ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಬಳಸಲು ನಮಗೆ ಅವಕಾಶವಿಲ್ಲ. ದೂರದ ಬಹ್ರೈನ್ ನಿಂದ ಬಂದ ಆಕ್ಸಿಜನ್ ಹಡಗೇರಿ ಖುಷಿಪಡುವ ಬಿಜೆಪಿ ನಾಯಕರ ಆತ್ಮ‌ನಿರ್ಭರತೆಗೆ ಚಪ್ಪಾಳೆ ಹೊಡೆಯಬೇಕೋ ದೀಪ ಹಚ್ಚಬೇಕೋ ತಿಳಿಯುತ್ತಿಲ್ಲ. ಧಿಕ್ಕಾರವಿದೆ ನಿಮ್ಮ ಅಸಮರ್ಥತೆಗೆ ಎಂದು ವಾಗ್ದಾಳಿ ನಡೆಸಿದ್ದಾರೆ.

- Advertisement -

ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ವೇದವ್ಯಾಸ ಕಾಮತ್, ದಕ್ಷಿಣ ಕನ್ನಡದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕಾರ್ಯಗಳ ಬಗ್ಗೆ ಮೊದಲು ತಿಳಿಯಿರಿ. ಈಗಾಗಲೇ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಬಹ್ರೈನ್ ನಿಂದ ಆಕ್ಸಿಜನ್ ತುಂಬಿರುವ ಹಡಗು ಬಂದಾಗ ಈ ಭಾಗದ ಜನರ ಪ್ರತಿನಿಧಿಗಳಾಗಿ ಅದನ್ನು ಸ್ವಾಗತಿಸಿದ್ದೇನೆ.  ಅದಕ್ಕಾಗಿ ತಾವು ದೀಪ ಹಚ್ಚುವುದೋ ಅಥವಾ ಚಪ್ಪಾಳೆ ತಟ್ಟುವ ಅವಶ್ಯಕತೆಯಿಲ್ಲ. ನಮ್ಮ ದೇಶದಿಂದ ಬೇರೆ ದೇಶಗಳಿಗೆ (ಬಹರೈನ್ ಸೇರಿದಂತೆ) ವಾಕ್ಸಿನ್ ಕಳುಹಿಸಿದಾಗ ಜರೆದವರು ನೀವುಗಳಲ್ಲವೇ? ಈಗ ಬಹರೈನ್ ಪರವಾಗಿ ಚಪ್ಪಾಳೆ ತಟ್ಟುತ್ತಿದ್ದೀರಿ. ನಿಮ್ಮ ಆತ್ಮನಿರ್ಭರತೆಯನ್ನು ಮೆಚ್ಚಬೇಕು ಎಂದು ತಿರುಗೇಟು ನೀಡಿದ್ದಾರೆ.

ಬಹ್ರೈನ್ ನಿಂದ 40 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತ ಐಎನ್‌ಎಸ್ ತಲ್ವಾರ್ ಹೆಸರಿನ ಹಡಗು ನಿನ್ನೆ ನವ ಮಂಗಳೂರು ಬಂದರಿಗೆ ಬಂದು ತಲುಪಿತ್ತು. ಬಹ್ರೈನ್ ನಿಂದ ಬಂದ ಈ ಕೊಡುಗೆಯನ್ನು ಬಿಜೆಪಿ ನಾಯಕರು ನರೇಂದ್ರ ಮೋದಿಯವರ ಕೊಡುಗೆ ಎಂಬಂತೆ ಬಿಂಬಿಸುತ್ತಾ ಫೋಟೋಗೆ ಪೋಸು ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಹಂಚುತ್ತಿದ್ದಾರೆ.  ಭಾರತವು ಬಹರೈನಿಗೆ ಲಸಿಕೆಯನ್ನು ಹಣಕ್ಕಾಗಿ ರಫ್ತು ಮಾಡಿದ್ದು, ಇದೀಗ ಮಾನವೀಯತೆಯ ನೆಲೆಯಲ್ಲಿ ಉಚಿತ ಸೇವೆಯನ್ನು ನೀಡಿರುವ ಬಹ್ರೈನಿನ ಹಡಗಿನ ಎದುರು ಬಿಜೆಪಿ ನಾಯಕರು ಫೋಟೋ ಪೋಸ್ ನೀಡಿರುವುದು ವಿಪರ್ಯಾಸ.

Join Whatsapp