ತುಮಕೂರು | ಜಿಲ್ಲಾ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ: ತಾಯಿ, ಅವಳಿ ಮಕ್ಕಳು ಸಾವು

Prasthutha|

ತುಮಕೂರು: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ನಿರ್ಲಕ್ಷ್ಯ ವಹಿಸಿದ ಪರಿಣಾಮ ತಾಯಿ, ಅವಳಿ ಮಕ್ಕಳು ಸೇರಿ ಮೂವರು ಬಲಿಯಾದ ಘಟನೆ ತುಮಕೂರಿನಲ್ಲಿ ನಡೆದಿದೆ.

- Advertisement -

ತುಮಕೂರು ಜಿಲ್ಲೆಯ ಭಾರತಿ ನಗರದ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪದಲ್ಲಿ ವಾಸವಾಗಿದ್ದ ಅನಾಥ ಮಹಿಳೆಗೆ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಸ್ಥಳೀಯ ನಿವಾಸಿಗಳು ಸೇರಿಕೊಂಡು ಜಿಲ್ಲಾ ಆಸ್ಪತ್ರೆಗೆ ಆಟೋದ ಮೂಲಕ ಕಳುಹಿಸಿದ್ದರು. ಈ ವೇಳೆ ಬಾಣಂತಿ ಮಹಿಳೆಯೊಂದಿಗೆ ನೆರೆಕರೆಯ ವೃದ್ದೆಯೊಬ್ಬರು ಹೋಗಿದ್ದರು ಎಂದು ತಿಳಿದುಬಂದಿದೆ.

ಈ ಮಧ್ಯೆ ಆಸ್ಪತ್ರೆಯಲ್ಲಿ ಮಹಿಳೆಗೆ ತಾಯಿ ಕಾರ್ಡ್ ಇಲ್ಲ ನೆಪ ನೀಡಿ, ಆಸ್ಪತ್ರೆ ಸೇರಿಸದೆ ಹಿಂದಕ್ಕೆ ಕಳುಹಿಸಿದ್ದರು ಎಂಬ ಆರೋಪ ದಟ್ಟವಾಗಿ ಕೇಳಿಬಂದಿದೆ. ವೈದ್ಯರ ಬಳಿ ಚಿಕಿತ್ಸೆ ನೀಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕೂಡ ಚಿಕಿತ್ಸೆ ನೀಡದೆ ವೈದ್ಯರು ನಿರ್ಲಕ್ಷ್ಯ ವಹಿಸಿದ್ದರಿಂದ ಮಕ್ಕಳು ಮತ್ತು ತಾಯಿ ಸೇರಿ ಮೂವರು ಸಾವನ್ನಪ್ಪಿದ್ದಾರೆ.

- Advertisement -

ಇದರ ಹೊರತಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಬದಲು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಬರೆದು ಕೊಡುತ್ತೇವೆ ಅಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಗರ್ಭಿಣಿ ಮಹಿಳೆಗೆ ತಿಳಿಸಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹಣದ ಕೊರತೆಯಿಂದಾಗಿ ಮಹಿಳೆ ಮನೆಗೆ ವಾಪಸ್ ಹೋಗಿದ್ದರು. ಇದಾದ ಬಳಿಕ ಬೆಳಗ್ಗಿನ ಜಾವ ಮಹಿಳೆ ಅನಾರೋಗ್ಯದ ಮಧ್ಯೆ ಒಂದು ಮಗುವಿಗೆ ಜನ್ಮ ನೀಡಿದ್ದ ಬೆನ್ನಲ್ಲೇ ಮತ್ತೊಂದು ಜನ್ಮ ನೀಡಿದಾಗ ಅಧಿಕ ರಕ್ತಸ್ರಾವದಿಂದಾಗಿ 3 ಮಂದಿಯೂ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಮಹಿಳೆಯನ್ನು ತಮಿಳುನಾಡು ಮೂಲದ ಕಸ್ತೂರಿ ಎಂದು ಗುರುತಿಸಲಾಗಿದೆ.

ಆಕೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು ಎಂದು ಹೇಳಲಾಗಿದೆ. ಈಕೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬರುತ್ತಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಮಂಜುನಾಥ್ ಭೇಟಿ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು DHO ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಪ್ಪಿತಸ್ಥ ವೈದ್ಯರನ್ನು ಅಮಾನತು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಘಟನೆಯ ಪ್ರತಿಕ್ರಿಯಿಸಿದ ವೈದ್ಯಾಧಿಕಾರಿ ಮಂಜುನಾಥ್, ಜಿಲ್ಲಾಸ್ಪತ್ರೆಯಲ್ಲಿ ಸಂಬಂಧಪಟ್ಟ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಅಮಾನತುಗೊಳಿಸಿರುವುದಾಗಿ ತಿಳಿಸಿದ್ದಾರೆ.

Join Whatsapp