ಡಿ.21ರಿಂದ ಆಳ್ವಾಸ್ ನಲ್ಲಿ ಸ್ಕೌಟ್ಸ್- ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ: ಯಶಸ್ಸಿಗೆ ಜಿಲ್ಲಾಧಿಕಾರಿ ನಿರ್ದೇಶನ

Prasthutha|

ಮಂಗಳೂರು: ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಸ್ಕೌಟ್ಸ್-ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆಯಲ್ಲಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಕೀರ್ಣದಲ್ಲಿ 2022ರ ಡಿಸೆಂಬರ್ 21ರಿಂದ 27ರವರೆಗೆ ನಡೆಯಲಿದ್ದು, ಅದರ ಯಶಸ್ಸಿಗೆ ಅಧಿಕಾರಿಗಳು ತಂಡೋಪಾದಿಯಲ್ಲಿ ಕೆಲಸ ಮಾಡುವಂತೆ ನೂತನ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ನಿರ್ದೇಶನ ನೀಡಿದರು.

- Advertisement -

ಅವರು ಗುರುವಾರ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಈ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನ ಹಾಗೂ ಸಂಸದರು, ಶಾಸಕರು ಹಾಗೂ ಜನಪ್ರತಿನಿಧಿಗಳ ಸಹಕಾರದಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಿದ್ದಲ್ಲಿ ಅದರ ಕೀರ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಜನರಿಗೆ ಸಂದಲಿದೆ, ಅದಕ್ಕಾಗಿ ಇದೊಂದು ಸುವರ್ಣಾವಕಾಶವಾಗಿದ್ದು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ವಹಿಸುವ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು, ಮುಖ್ಯವಾಗಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಗಮಿಸುವುದರಿಂದ ಪ್ರವಾಸೋದ್ಯಮದ ಉತ್ತೇಜಕ್ಕೆ ಅನುಕೂಲಕರವಾಗಿ ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

- Advertisement -

ಪ್ರಮುಖವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪಾತ್ರ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಅತ್ಯಂತ ಪ್ರಮುಖ ಹಾಗೂ ಮಹತ್ವದ್ದಾಗಿದೆ, ಮಕ್ಕಳ ಸುರಕ್ಷತೆ, ವಾಸ್ತವ್ಯ, ಊಟೋಪಚಾರ, ಸಾರಿಗೆ ಸೇರಿದಂತೆ ಅಗತ್ಯ ಚಟುವಟಿಕೆಗಳಿಗೆ ಎಲ್ಲಿಯೂ ಚ್ಯೂತಿ ಬಾರದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು, ಅವರೊಂದಿಗೆ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಒದಗಿಸಬೇಕು ಹಾಗೂ ವಿವಿಧ ಇಲಾಖೆಗಳು ನಿಭಾಯಿಸಬೇಕಾದ ಹಲವು ಕರ್ತವ್ಯಗಳನ್ನು ಜಿಲ್ಲಾಧಿಕಾರಿಯವರು ತಿಳಿಸಿದರು.

ಭಾರತ್ ಸ್ಕೌಟ್ಸ್-ಗೈಡ್ಸ್ನ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಮುಖ್ಯ ಆಯುಕ್ತ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಮೋಹನ್ ಆಳ್ವಾ ಮಾತನಾಡಿ, ಸ್ಕೌಟ್ಸ್-ಗೈಡ್ಸ್ ಯುವ ಜನರಲ್ಲಿ ದೇಶಾಭಿಮಾನ, ಕ್ರೀಡಾ ಮತ್ತು ಸೇವಾ ಮನೋಭಾವನೆ, ಕ್ರಿಯಾಶೀಲತೆ, ಸಚ್ಛಾರಿತ್ರ್ಯ, ಜೀವನ ಕೌಶಲ್ಯ ಹಾಗೂ ನಾಯಕತ್ವ ಗುಣಗಳನ್ನು ಕಲಿಸುವುದರೊಂದಿಗೆ ಸರ್ವಧರ್ಮಗಳ ಸಮನ್ವಯತೆಯನ್ನು ಸಾರುವುದರೊಂದಿಗೆ ಶಿಸ್ತಿನ ನಾಗರೀಕರನ್ನಾಗಿ ನಿರ್ಮಾಣ ಮಾಡುವ ಸ್ವಯಂ ಸೇವಾ ಸಂಸ್ಥೆಯಾಗಿದೆ ಎಂದರು.

ಮೂಡುಬಿದರೆ ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, ವಿದ್ಯಾ ಕಾಶಿ, ಜೈನಕಾಶಿ ಹಾಗೂ ಸಾಂಸ್ಕೃತಿಕ ಕಾಶಿಯಾಗಿರುವ ಮೂಡಬಿದಿರೆಯಲ್ಲಿ ಮೂಡುಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜನರ ನಿರೀಕ್ಷೆಯಂತೆಯೇ ಈ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಹಾಗೂ ಸಚಿವರು ಸೇರಿದಂತೆ ಕೇಂದ್ರ ಸಚಿವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಲ್ಲರೂ ಸೇರಿ ವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ರೂಪಿಸಬೇಕು, ಇದಕ್ಕೆ ಎಲ್ಲರೂ ಸಹಕರಿಸುವಂತೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕುರಿತಂತೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಮಂಗಳೂರು ಮೇಯರ್ ಜಯಾನಂದ ಅಂಚನ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅನ್ಶು ಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ವೇದಿಕೆಯಲ್ಲಿದ್ದರು.

ಮಾಜಿ ಸಚಿವ ನಾಗರಾಜ್ ಶೆಟ್ಟಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

Join Whatsapp