ಹೈದರಾಬಾದ್: ಪ್ರಧಾನಿ ಮೋದಿ ಅವರು ಮುಸ್ಲಿಮರನ್ನು ‘ಹಿಂದೂ ನಾಗರಿಕ ಸಂಹಿತೆ’ಗೆ ಸೇರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಉವೈಸಿ ಕಿಡಿಕಾರಿದ್ದಾರೆ.
ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಕುರಿತು ಇಂಗಿತ ವ್ಯಕ್ತಪಡಿಸಿರುವ ಮೋದಿ ವಿರುದ್ಧ ಉವೈಸಿ ವಾಗ್ದಾಳಿ ನಡೆಸಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ ನಲ್ಲಿ ಮಂಗಳವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ, ‘ಮನೆಯಲ್ಲಿ ಒಬ್ಬರಿಗೆ ಒಂದು, ಇನ್ನೊಬ್ಬರಿಗೆ ಇನ್ನೊಂದು ಕಾನೂನು ಇದ್ದರೆ ಕುಟುಂಬವನ್ನು ನಿಭಾಯಿಸುವುದು ಕಷ್ಟ. ಅಂತೆಯೇ ಎರಡು ಕಾನೂನುಗಳಿದ್ದರೆ ರಾಷ್ಟ್ರವನ್ನು ಮುನ್ನಡೆಸಲು ಸಾಧ್ಯವೇ’ ಎಂದು ಕೇಳಿದ್ದರು. ಆ ಮೂಲಕ, ದೇಶದಲ್ಲಿ ಯುಸಿಸಿ ಜಾರಿಯ ಅಗತ್ಯವನ್ನು ಪ್ರತಿಪಾದಿಸಿದ್ದರು.
ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉವೈಸಿ, ‘ದೇಶದ ಪ್ರಧಾನಿಯವರು ಈಗ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಮಾತನಾಡುತ್ತಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಹೆಸರಿನಲ್ಲಿ ಬಹುತ್ವ, ವೈವಿಧ್ಯತೆಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದೀರಾ?’ ಎಂದು ಕೇಳಿದ್ದಾರೆ.