ಪ್ರಚೋದನಾಕಾರಿ ಪೋಸ್ಟ್: ನೂರಾರು ಮಂದಿಯ ವಿರುದ್ಧ ತ್ರಿಪುರಾ ಪೊಲೀಸರಿಂದ ಕ್ರಿಮಿನಲ್ ಪ್ರಕರಣ

Prasthutha|

ಅಗರ್ತಲಾ: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಾಕಾರಿ ಮತ್ತು ನಕಲಿ ಪೋಸ್ಟ್ ಗಳನ್ನು ಮಾಡಿದ ನೆಪದಲ್ಲಿ ತ್ರಿಪುರಾ ಪೊಲೀಸರು ನೂರಾರು ಮಂದಿಯ ವಿರುದ್ಧ ಬುಧವಾರ ಐದು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

- Advertisement -

ಈ ಕುರಿತು ತನ್ನ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಪ್ರತಿಕ್ರಿಯಿಸಿದ ತ್ರಿಪುರಾ ಪೊಲೀಸರು, ಸುಳ್ಳು ಸುದ್ದಿ ಮತ್ತು ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಮಾತ್ರವಲ್ಲ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಶಾಂತಿ ಸೃಷ್ಟಿಸುವವರ ಮೇಲೆ ನಿಗಾ ವಹಿಸಲಾಗಿದೆ. ನಕಲಿ ಚಿತ್ರ ಮತ್ತು ಮಾಹಿತಿಯನ್ನು ಹರಡುವವರ ಮೇಲೆ ಕಠಿಣ ಕಾನೂನಿನ ಅಡಿಯಲ್ಲಿ ಬಂಧಿಸಲಾಗುವುದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಅನಿವಾರ್ಯವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

- Advertisement -

ಉತ್ತರ ತ್ರಿಪುರಾದ ಪಾಣಿಸಾಗರ್ ಎಂಬಲ್ಲಿರುವ ಮಸೀದಿ ಮತ್ತು ಕೆಲವು ಅಂಗಡಿ, ಮನೆಗಳನ್ನು ಧ್ವಂಸಗೊಳಿಸಿದ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಾಮಾನ್ಯ ಸ್ಥಿತಿಯಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪಾಣಿಸಾಗರದಲ್ಲಿ ಮಸೀದಿ ಉರಿಯುತ್ತಿರುವ ಚಿತ್ರಗಳು ನಕಲಿ ಎಂದು ತಿಳಿಸಿದ ಪೊಲೀಸರು, ಕೆಲವು ದುಷ್ಕರ್ಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ನಕಲಿ ಚಿತ್ರಗಳನ್ನು ಅಪ್ ಲೋಡ್ ಮಾಡಿದ ಮೂಲಗಳ ಕುರಿತು ಪತ್ತೆ ಹಚ್ಚಲು ತಂಡಗಳನ್ನು ರಚಿಸಲಾಗಿದೆ ಎಂದು ತ್ರಿಪುರಾ ಪೊಲೀಸರು ತಿಳಿಸಿದ್ದಾರೆ.

ಮುಸ್ಲಿಮರನ್ನು ಗುರಿಯಾಗಿಸಿ ನಡೆದ ಹಿಂಸೆಯ ಹಿನ್ನೆಲೆಯಲ್ಲಿ ಮುಸ್ಲಿಮ್ ಸಮುದಾಯದ ಮುಖಂಡರು ಕಳವಳ ವ್ಯಕ್ತಪಡಿಸಿದ್ದರಿಂದ ಪ್ರಸಕ್ತ ಗೊಂದಲವನ್ನು ನಿವಾರಿಸಲು ಎಲ್ಲಾ ಮಸೀದಿಗಳಲ್ಲಿ ಭದ್ರತೆ ಮತ್ತು ಪೊಲೀಸ್ ಗಸ್ತನ್ನು ಹೆಚ್ಚಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.



Join Whatsapp