ಅಗರ್ತಲಾ: ಕಳೆದ ತಿಂಗಳು ತ್ರಿಪುರಾದ ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ನಾಲ್ವರು ಮುಸ್ಲಿಮ್ ವಿದ್ವಾಂಸರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ನೆರೆರಾಷ್ಟ್ರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ನಡೆದಿದೆ ಎಂಬ ನೆಪದಲ್ಲಿ ಸಂಘಪರಿವಾರದ ಕಾರ್ಯಕರ್ತರು ತ್ರಿಪುರಾದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ವ್ಯಾಪಕ ಹಿಂಸಾಚಾರ ನಡೆಸಿ ಹಲವಾರು ಮಸೀದಿ, ಮನೆ ಮತ್ತು ಅಂಗಡಿಗಳನ್ನು ಧ್ವಂಸ ಮಾಡಿದ್ದರು. ಮಾತ್ರವಲ್ಲ ಮಹಿಳೆಯರೂ ಸೇರಿದಂತೆ ಅನೇಕ ಮಂದಿಯ ವಿರುದ್ಧ ದೌರ್ಜನ್ಯ ನಡೆಸಿದ್ದರು.
ಅಪಾರ ನಾಶನಷ್ಟಕ್ಕೊಳಗಾದ ತ್ರಿಪುರಾದ ಪಾಣಿಸಾಗರ ಮತ್ತು ಧರ್ಮನಗರಕ್ಕೆ ಭೇಟಿ ನೀಡಲು ತೆರಳಿದ್ದ ಮುಸ್ಲಿಮ್ ವಿದ್ವಾಂಸರನ್ನು ಪಾಣಿಸಾಗರ ಪೊಲೀಸ್ ಠಾಣೆಯ ಅಧಿಕಾರಿಗಳು ಐಪಿಸಿ ಸೆಕ್ಷನ್ 153 ಎ, ಬಿ, 503, 504 ಅಡಿಯಲ್ಲಿ ಬಂಧಿಸಿದ್ದಾರೆ.
ಗಲಭೆ ಪೀಡಿತ ಪ್ರದೇಶದ ಸಂತ್ರಸ್ತರಿಗೆ ಸಾಂತ್ವನ ಹೇಳಲು ಅಲ್ಲಿಗೆ ಭೇಟಿ ನೀಡಿದವರನ್ನು ಬಂಧಿಸಿ ಠಾಣೆಗೆ ಕರೆದೊಯ್ಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿದ್ವಾಂಸರೊಬ್ಬರು ಪ್ರತಿಕ್ರಿಯಿಸುತ್ತಾ “ ಗಲಭೆ ಪೀಡಿತ ಜನರಿಗೆ ನೆರವಾಗಲು ತೆರಳಿದ್ದ ವೇಳೆ ನಮ್ಮನ್ನು ಬಂಧಿಸಲಾಗಿದೆ. ಪೊಲೀಸರ ನಡೆಯಿಂದ ನಾವು ಧೃತಿಗೆಡದೆ ನ್ಯಾಯಯುತ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದರು.
ಪೊಲೀಸರ ಅಮಾನವೀಯ ನಡೆಗೆ ನೆಟ್ಟಿಗರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.