ಮಂಗಳೂರು : ಜಿಲ್ಲೆಯಲ್ಲಿ ವಿಶ್ವ ಹಿಂದು ಪರಿಷತ್, ಭಜರಂಗದಳ ಸಂಘಟನೆಗಳು ಆಯುಧ ಪೂಜೆ ನೆಪ ಇಟ್ಟುಕೊಂಡು ಮಂಗಳೂರು, ಕಲ್ಲಡ್ಕ ಮತ್ತು ಇತರ ಪ್ರದೇಶಗಳಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ತಮ್ಮ ಸಂಘಟನೆಯ ಗೂಂಡಾಗಳಿಗೆ ಬಹಿರಂಗವಾಗಿ ತ್ರಿಶೂಲ ವಿತರಿಸಿದ ಬಗ್ಗೆ ಪೋಲಿಸ್ ಇಲಾಖೆ ಮೌನ ಸಮ್ಮತಿ ನೀಡಿರುವ ಕ್ರಮವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ತೀವ್ರವಾಗಿ ಖಂಡಿಸಿದ್ದು, ಸಭೆಯ ಆಯೋಜಕರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜಿಲ್ಲೆಯಲ್ಲಿ ಇತ್ತೀಚಿಗೆ ಹಲವು ನೈತಿಕ ಪೋಲಿಸ್ ಗಿರಿ ಘಟನೆಗಳು ನಡೆದ ಸಂದರ್ಭದಲ್ಲಿ ಸಂಘಪರಿವಾರದ ಗೂಂಡಾಗಳ ವಿರುದ್ಧ ಪೋಲಿಸ್ ಇಲಾಖೆ ಸಣ್ಣ ಪುಟ್ಟ ಸೆಕ್ಷನ್ ಹಾಕಿ ಶೀಘ್ರ ಜಾಮೀನು ದೊರಕಲು ಅನುಕೂಲ ಮಾಡಿಕೊಟ್ಟಿದೆ. ನಂತರ ಮುಖ್ಯ ಮಂತ್ರಿ ಬೊಮ್ಮಾಯಿ ಜಿಲ್ಲೆಯ ಭೇಟಿ ಸಂದರ್ಭದಲ್ಲಿ ಅನೈತಿಕ ಪೋಲಿಸ್ ಗಿರಿಯನ್ನು ಸಮರ್ಥಿಸಿ ಹೇಳಿಕೆ ಕೊಟ್ಟು ಸಂಘದ ಕಿರಾತಕರಿಗೆ ಅರಾಜಕತೆ ಸೃಷ್ಟಿಸಲು ಅವಕಾಶ ಮಾಡಿಕೊಟ್ಟ ಪರಿಣಾಮ ಇದೀಗ ತಮ್ಮ ಗೂಂಡಾಗಳಿಗೆ ಧಾರ್ಮಿಕ ಕಾರ್ಯಕ್ರಮವಾದ ಆಯುಧ ಪೂಜೆಯ ನೆಪದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಭಜರಂಗದಳದ ಗೂಂಡಾಗಳಿಗೆ ಬಹಿರಂಗವಾಗಿ ತ್ರಿಶೂಲ ವಿತರಿಸಿ ರಾಷ್ಟ್ರ ದ್ರೋಹದ ಕೃತ್ಯವನ್ನು ಸಂಘಪರಿವಾರ ಪುನಃ ಪುನರಾವರ್ತನೆ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡಬೇಕಾದ ಪೊಲೀಸರು ಇಂತಹ ಬಹಿರಂಗ ಕಾರ್ಯಕ್ರಮ ನಡೆದಾಗ ಸುಮಟೋ ಪ್ರಕರಣ ದಾಖಲಿಸುವುದನ್ನು ಬಿಟ್ಟು ಕಣ್ಣು ಮುಚ್ಚಿಕೊಂಡು ಕಾರ್ಯಕ್ರಮಕ್ಕೆ ಮೌನ ಸಮ್ಮತಿ ನೀಡಿರುವುದು ವಿಪರ್ಯಾಸವಾಗಿದೆ, ಕೂಡಲೇ ಕಿಡಿಗೇಡಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸುವಂತೆ ಅಥಾವುಲ್ಲಾ ಆಗ್ರಹಿಸಿದ್ದಾರೆ.
ಅದೇ ರೀತಿ ಆಯುಧ ವಿತರಣೆ ಮಾಡುವುದರ ಮೂಲಕ ಜಿಲ್ಲೆಯ ಜನತೆಯನ್ನು ಭಯಪಡಿಸಬಹುದು ಎಂಬ ಭ್ರಮೆ ಸಂಘಪರಿವಾರಕ್ಕೆ ಇದ್ದರೆ ಜನತೆಯ ಆ ಭಯವನ್ನು ಎಲ್ಲಾ ರೀತಿಯಿಂದಲೂ ಇಲ್ಲವಾಗಿಸಲು SDPI ಸನ್ನದ್ಧವಾಗಿದೆ. ಮಾತ್ರವಲ್ಲದೆ ಜಿಲ್ಲೆಯ ಶಾಂತಿ, ಸೌಹಾರ್ದತೆ, ಭಾವೈಕ್ಯತೆಯನ್ನು ಉಳಿಸಲು ಎಸ್ ಡಿಪಿಐ ನಿರಂತರವಾಗಿ ಪ್ರಯತ್ನಪಟ್ಟು ಸಂಘಪರಿವಾರದ ಷಡ್ಯಂತ್ರವನ್ನು ವಿಫಲಗೊಳಿಸಲಿದೆ ಎಂದು ಅಥಾವುಲ್ಲಾ ಜೋಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ