ಪಿಎಫ್ಐ ನಿಷೇಧ ಸರಿಯೇ ಎಂಬುದನ್ನು ಪರಿಶೀಲಿಸಲು 30 ದಿನಗಳ ಒಳಗಾಗಿ ನ್ಯಾಯಮಂಡಳಿ ರಚನೆ

Prasthutha|

►ನಿಷೇಧಕ್ಕೆ ಸಾಕಷ್ಟು ಪುರಾವೆಗಳಿವೆಯೇ ಎಂದು ನಿರ್ಧರಿಸಲಿರುವ ನ್ಯಾಯಮಂಡಳಿ

- Advertisement -


►6 ತಿಂಗಳೊಳಗಾಗಿ ವಾದ-ವಿವಾದ ಪೂರ್ಣಗೊಳಿಸಿ ತೀರ್ಪು ನೀಡಲಿರುವ ಮಂಡಳಿ


ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಲು ಅಗತ್ಯವಾದಷ್ಟು ಕಾರಣಗಳು ಇವೆಯೇ ಎಂಬುದನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು 30 ದಿನಗಳ ಒಳಗಾಗಿ ನ್ಯಾಯಮಂಡಳಿಯನ್ನು ರಚಿಸಬೇಕಾಗುತ್ತದೆ. ಮಂಡಳಿಯ ಎದುರು ತನ್ನನ್ನು ಸಮರ್ಥಿಸಿಕೊಳ್ಳಲು ಪಿಎಫ್ ಐಗೆ ಅವಕಾಶ ದೊರೆಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುಎಪಿಎಯ ಸೆಕ್ಷನ್ 4 ರ ಅಡಿಯಲ್ಲಿ 30 ದಿನಗಳ ಒಳಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ನ್ಯಾಯಮಂಡಳಿ ರಚನೆ ಸಂಬಂಧ ಸರ್ಕಾರ ಕಡ್ಡಾಯವಾಗಿ ಅಧಿಸೂಚನೆಯನ್ನು ಹೊರಡಿಸಬೇಕು. ರಾಷ್ಟ್ರೀಯ ತನಿಖಾ ಸಂಸ್ಥೆ, ಜಾರಿ ನಿರ್ದೇಶನಾಲಯ ಮತ್ತು ರಾಜ್ಯ ಪೊಲೀಸ್ ಇಲಾಖೆಗಳು ದೇಶಾದ್ಯಂತ ಪಿಎಫ್ ಐ ಮತ್ತು ಅದರ ಕಾರ್ಯಕರ್ತರ ವಿರುದ್ಧ ದಾಖಲಿಸಿರುವ ಪ್ರಕರಣಗಳ ವಿವರಗಳನ್ನು ಇದರಲ್ಲಿ ಉಲ್ಲೇಖೀಸಬೇಕು.

- Advertisement -


ಪಿಎಫ್ ಐ ವಿರುದ್ಧದ ಆರೋಪಗಳನ್ನು ಸ್ವೀಕರಿಸಿದ ಬಳಿಕ ನ್ಯಾಯಮಂಡಳಿಯು, ‘ನಿಮ್ಮ ಸಂಘಟನೆಯನ್ನು ಏಕೆ ನಿಷೇಧಿಸಬಾರದು’ ಎಂಬುದರ ಬಗ್ಗೆ ಲಿಖಿತವಾಗಿ ಉತ್ತರಿಸುವಂತೆ ಪಿಎಫ್ ಐಗೆ ಶೋಕಾಸ್ ನೋಟಿಸ್ ನೀಡುತ್ತದೆ. ಎರಡೂ ಕಡೆಯ ದಾಖಲೆ ಸಲ್ಲಿಕೆಗಳ ಆಧಾರದ ಮೇಲೆ, ಪಿಎಫ್ ಐ ಅನ್ನು “ಕಾನೂನುಬಾಹಿರ ಸಂಘಟನೆ” ಎಂದು ಘೋಷಿಸಲು ಸಾಕಷ್ಟು ಪುರಾವೆಗಳಿವೆಯೇ ಎಂದು ನಿರ್ಧರಿಸಲು ನ್ಯಾಯಮಂಡಳಿ ಕೂಡ ತನಿಖೆ ನಡೆಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಪಿಎಫ್ ಐನ ಕಾನೂನು ತಂಡಕ್ಕೆ ನ್ಯಾಯಾಧಿಕರಣದ ಮುಂದೆ ತನ್ನ ಪ್ರತಿವಾದವನ್ನು ಮಂಡಿಸಲು ಅವಕಾಶ ನೀಡಲಾಗುತ್ತದೆ. ಅದರ ವಕೀಲರು ನ್ಯಾಯಾಧಿಕರಣದ ಮುಂದೆ ಸಲ್ಲಿಸಲಾದ ಹಿನ್ನೆಲೆ ಟಿಪ್ಪಣಿ, ಪತ್ರವ್ಯವಹಾರ ಕಡತಗಳು ಮತ್ತು ಇತರ ಯಾವುದೇ ದಾಖಲೆಗಳನ್ನು ಕೇಳಬಹುದು ಎಂದು ಹೆಸರು ಹೇಳಲಿಚ್ಛಿಸದ ಇನ್ನೊಬ್ಬ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕೇಂದ್ರ ಏಜೆನ್ಸಿಗಳು ಮತ್ತು ರಾಜ್ಯ ಪೊಲೀಸರು ನ್ಯಾಯಾಧಿಕರಣದ ಮುಂದೆ ಸಾಕ್ಷ್ಯಗಳನ್ನು ನೀಡಬೇಕಾಗುತ್ತದೆ, ಇದನ್ನು ಪಿಎಫ್ ಐನ ಕಾನೂನು ತಂಡವು ಪಾಟೀಸವಾಲಿಗೆ ಒಳಪಡಿಸಬಹುದು ಎಂದು ಅವರು ತಿಳಿಸಿದ್ದಾರೆ.


ಸಾಕ್ಷಿಗಳ ಗುರುತನ್ನು “ಮರೆಮಾಚಲು” ಮತ್ತು ಕೆಲವು ದಾಖಲೆಗಳನ್ನು “ಮುಚ್ಚಿದ ಲಕೋಟೆಯಲ್ಲಿ” ಸಲ್ಲಿಸುವಂತೆ ಸರ್ಕಾರವು ನ್ಯಾಯಾಧಿಕರಣಕ್ಕೆ ಮನವಿ ಮಾಡಬಹುದು ಎಂದು ಅಧಿಕಾರಿ ಹೇಳಿದರು. ಈ ಎಲ್ಲಾ ಪ್ರಕ್ರಿಯೆ ಆರು ತಿಂಗಳಲ್ಲಿ ಪೂರ್ಣಗೊಳ್ಳಬೇಕು.


ಅಂತಿಮವಾಗಿ, ಎರಡೂ ಕಡೆಯ ವಾದಗಳ ಆಧಾರದ ಮೇಲೆ ಪಿಎಫ್ ಐ ಅನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸುವ ಅಧಿಸೂಚನೆಯನ್ನು ದೃಢೀಕರಿಸುವ ಅಥವಾ ಅದನ್ನು ರದ್ದುಗೊಳಿಸುವ ಆದೇಶವನ್ನು ನ್ಯಾಯಮಂಡಳಿ ಹೊರಡಿಸುತ್ತದೆ.

Join Whatsapp