ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕೊರಿಯರ್ ಪಾರ್ಸೆಲ್ ಕಳುಹಿಸಲು ಹಾಗೂ ಪಡೆಯಲು ಅಧೀಕ್ಷಕರ ಅನುಮತಿ ಕಡ್ಡಾಯಗೊಳಿಸಲಾಗಿದೆ.
ಇತ್ತೀಚೆಗೆ ಬಂದಿದ್ದ ಕೋರಿಯರ್ ಪಾರ್ಸೆಲ್ ನಲ್ಲಿ ಡ್ರಗ್ಸ್ ಪತ್ತೆಯಾಗಿರುವ ಪ್ರಕರಣದ ಬೆನ್ನಲ್ಲೇ ಜೈಲಿನಲ್ಲಿ ಹೊಸ ನಿಯಮ ರೂಪಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ‘ಅನುಮತಿ ಇಲ್ಲದ ಕೊರಿಯರ್ ಪಾರ್ಸೆಲ್ ಗಳನ್ನು ಜೈಲಿನ ಸಿಬ್ಬಂದಿ ಸ್ವೀಕರಿಸಬಾರದು’ ಎಂದು ಜೈಲಿನ ಮುಖ್ಯ ಅಧೀಕ್ಷಕರು ಸಿಬ್ಬಂದಿಗೆ ಸೂಚಿಸಿದ್ದಾರೆ
‘ಯಾವುದೇ ಪಾರ್ಸೆಲ್ ಪಡೆಯಬೇಕಾದರೆ, ವಾರದ ಮುಂಚೆಯೇ ಜೈಲಿನ ಮುಖ್ಯ ಅಧೀಕ್ಷಕರಿಂದ ಅನುಮತಿ ಪಡೆಯಬೇಕು. ಪಾರ್ಸೆಲ್ ನಲ್ಲಿ ಏನಿರುತ್ತೆ? ಎಂಬುದನ್ನು ತಿಳಿಸಬೇಕು. ಅನುಮತಿ ಪಡೆಯದಿದ್ದರೆ, ಪಾರ್ಸೆಲ್ ವಾಪಸು ಕಳುಹಿಸಲಾಗುವುದು. ಈ ಬಗ್ಗೆ ಕೈದಿಗಳು, ಸಂಬಂಧಿಕರು ಹಾಗೂ ಇತರರಿಗೆ ತಿಳಿಸಬೇಕು’ ಎಂದು ಅವರು ತಿಳಿಸಿದ್ದಾರೆ.