ಕಾಸರಗೋಡು ಜಿಲ್ಲೆಯಲ್ಲಿ ಬಿರುಸಿನ ಮಳೆ: ಇಬ್ಬರು ಮೃತ

Prasthutha|

ದಕ್ಷಿಣ ಕನ್ನಡ & ಉಡುಪಿ ಜಿಲ್ಲೆಗಳಲ್ಲೂ ಉತ್ತಮ ಮಳೆ

- Advertisement -

ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಬುಧವಾರ ಇಬ್ಬರು ಮೃತಪಟ್ಟಿದ್ದಾರೆ.

ಮಡಿಕೈ ಬಂಗಳದಲ್ಲಿ ಸಿಡಿಲು ಬಡಿದು ವೃದ್ಧರೋರ್ವರು ಮೃತಪಟ್ಟಿದ್ದಾರೆ. ಬಂಗಳಂ ಪುದಿಯ ಕಂಡಂ ನಿವಾಸಿ ಬಾಲನ್‌ (70) ಮೃತರು. ಬುಧವಾರ ಸಂಜೆ ಗುಡುಗು ಸಿಡಿಲಿನೊಂದಿಗೆ ಮಳೆಯಾಗಿತ್ತು. ಈ ಸಂದರ್ಭ ಮನೆಯ ಹಿತ್ತಿಲಿನಲ್ಲಿ ಇದ್ದ ಬಾಲನ್‌ ಅವರಿಗೆ ಸಿಡಿಲು ಬಡಿಯಿತು. ಕೂಡಲೇ ಕಾಂಞಂಗಾಡ್‌ನ‌ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಮೃತರಾಗಿದ್ದಾರೆ.

- Advertisement -

ತುಂಬಿ ಹರಿಯುತ್ತಿರುವ ಚೆರ್ವತ್ತೂರಿನ ಮೀನ್‌ಕಡವು ಹೊಳೆಗೆ ಬಿದ್ದು ವೃದ್ಧೆಯೋರ್ವರು ಮೃತಪಟ್ಟಿದ್ದಾರೆ‌. ಚೆರ್ವತ್ತೂರು ಅಚ್ಚಾಂತುರ್ತಿ ನಿವಾಸಿ ಪುದಿಯಪುರ ವಳಪ್ಪಿಲ್‌ ವೆಳ್ಳಚ್ಚಿ (81) ಮೃತರು.ಮೀನ್‌ಕಡವಿನ ಸಹೋದರಿಯ ಮನೆಯಲ್ಲಿ ವಾಸಿಸುತ್ತಿದ್ದ ವೆಳ್ಳಚ್ಚಿ ಬುಧವಾರ ಮಧ್ಯಾಹ್ನ ನಾಪತ್ತೆಯಾಗಿದ್ದರು. ಶೋಧ ನಡೆಸಿದಾಗ ಹೊಳೆಯ ನೀರಿನಲ್ಲಿ ಶವ ಪತ್ತೆಯಾಯಿತು. ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಆದೂರು ಪಳ್ಳದಲ್ಲಿ ಸುಂಟರ ಗಾಳಿಯಿಂದ ತೆಂಗಿನ ಮರ ವಿದ್ಯುತ್‌ ತಂತಿ ಮೇಲೆ ಬಿದ್ದ ಪರಿಣಾಮವಾಗಿ ವಿದ್ಯುತ್‌ ಕಂಬ ಅಬ್ದುಲ್‌ ಖಾದರ್‌ ಅವರ ಅಂಗಡಿ ಮೇಲೆ ಬಿದ್ದಿದೆ. ವಿದ್ಯುತ್‌ ಸಂಪರ್ಕ ಮೊಟಕುಗೊಂಡ ಸಂದರ್ಭದಲ್ಲಿ ವಿದ್ಯುತ್‌ ಕಂಬ ಅಂಗಡಿಯ ಮೇಲೆ ಬಿದ್ದ ಕಾರಣದಿಂದ ಸಂಭವನೀಯ ದುರಂತ ತಪ್ಪಿದೆ. ಅಂಗಡಿಯ ಹೆಂಚು ಸಹಿತ ವಿವಿಧ ಸಾಮಗ್ರಿಗಳು ಹಾನಿಗೀಡಾಗಿವೆ.

ಯೆಲ್ಲೋ ಅಲರ್ಟ್‌
ಮೇ 25ರ ವರೆಗೆ ಬಿರುಸಿನ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೇಂದ್ರ ಹವಾಮಾನ ಇಲಾಖೆ ಕಾಸರಗೋಡು ಜಿಲ್ಲೆಯಲ್ಲಿ ಮೇ 23ರಿಂದ ಯೆಲ್ಲೋ ಅಲರ್ಟ್‌ ಘೋಷಿಸಿದೆ. 24 ಗಂಟೆಗಳಲ್ಲಿ 115.6ರಿಂದ 204.4 ಮಿ.ಮೀ. ತನಕ ಮಳೆಯಾಗುವ ಸಾಧ್ಯತೆಯಿದೆ. ಗುಡ್ಡಗಾಡು ಪ್ರದೇಶದಲ್ಲಿ ಗುಡ್ಡೆ ಕುಸಿಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಜಾಗ್ರತೆ ವಹಿಸುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಮುಂದಿನ ಸೂಚನೆ ನೀಡುವ ತನಕ ಸಮುದ್ರದಲ್ಲಿ ಮೀನಗಾರಿಕೆಗೆ ತೆರಳದಂತೆ ತಿಳಿಸಲಾಗಿದೆ.

ದಕ್ಷಿಣ ಕನ್ನಡ:

ಬಂಟ್ವಾಳ, ಸುಳ್ಯ, ಬೆಳ್ತಂಗಡಿ, ಪುತ್ತೂರು ತಾಲೂಕಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿರುಸಿನ ಮಳೆಯಾಗಿದೆ.

ಭಾರೀ ಮಳೆಗೆ ಕೆಯ್ಯೂರು ಗ್ರಾಮದ ದೇರ್ಲದಲ್ಲಿ ಅಣ್ಣು ಅವರ ವಾಸದ ಮನೆಯ ಛಾವಣಿ ಮುರಿದು ಬಿದ್ದಿದೆ. ಮನೆ ಮಂದಿಗೆ ಅಪಾಯ ಉಂಟಾಗಿಲ್ಲ. ಅವರು ಸ್ಥಳೀಯ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ.

ಉಡುಪಿ:

ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಮೋಡ-ಬಿಸಿಲಿನ ವಾತಾವರಣದ ನಡುವೆ ಬೆಳಗ್ಗೆ ಸಂಜೆ ವೇಳೆ ಉತ್ತಮ ಮಳೆಯಾಗಿದೆ. ಕುಂದಾಪುರ, ಕಾರ್ಕಳ, ಬೈಂದೂರು, ಉಡುಪಿ, ಕಾಪು ಭಾಗದಲ್ಲಿ ಕೆಲಕಾಲ ನಿರಂತರ ಮಳೆಯಾಗಿದ್ದು, ಹೆಬ್ರಿ, ಕಾರ್ಕಳ ಸುತ್ತಮುತ್ತ ಧಾರಾಕಾರ ಮಳೆ ಸುರಿದಿದೆ.

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಮೇ 23 ರಿಂದ 26ರವರೆಗೆ ಕರಾವಳಿ ಭಾಗದಲ್ಲಿ ಯೆಲ್ಲೋ ಅಲರ್ಟ್‌’ ಘೋಷಣೆ ಮಾಡಲಾಗಿದೆ. ಈ ವೇಳೆ ಬಿರುಸಿನಿಂದ ಕೂಡಿದ ಮಳೆಯಾಗುವ
ಸಾಧ್ಯತೆ ಇದೆ.



Join Whatsapp