ಬೆಂಗಳೂರು: ರಾಜ್ಯಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜೀವ ಹಾನಿ ಮತ್ತು ಅಪಾರ ಪ್ರಮಾಣದ ನಾಶ ನಷ್ಟಗಳು ಸಂಭವಿಸಿವೆ.
ರಾಜಧಾನಿಯಲ್ಲಿ ನಿನ್ನೆ ರಾತ್ರಿ ಸುರಿದ ಜೋರು ಮಳೆಗೆ ಕಾವೇರಿ ನೀರಿನ ಪೈಪ್ ಲೈನ್ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಕಾರ್ಮಿಕರು ಬಲಿಯಾಗಿದ್ದಾರೆ. ಬಿಹಾರ ಮೂಲದ ದೇವ್ ಬಾತ್ ಹಾಗೂ ಉತ್ತರಪ್ರದೇಶದ ಅಂಕಿತ್ ಕುಮಾರ್ ಸಹಿತ ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ರಾತ್ರಿ ಏಳು ಗಂಟೆ ವೇಳೆ ಮಳೆಯ ರಭಸಕ್ಕೆ ಪೈಪಿನೊಳಗೆ ಏಕಾಏಕಿ ನೀರು ತುಂಬಿಕೊಂಡು ದೇವ್ ಬಾತ್ ಹಾಗೂ ಅಂಕಿತ್ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಕಾರ್ಮಿಕ ಅಪಾಯದಿಂದ ಪಾರಾಗಿದ್ದಾನೆ.
ಸ್ಥಳೀಯರ ಮಾಹಿತಿಯಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೇಲ್ನೊಟಕ್ಕೆ ನಿರ್ಲಕ್ಷ್ಯ ಕಂಡುಬಂದಿದ್ದು, ಈ ಬಗ್ಗೆ ಪೊಲೀಸರು ಇಬ್ಬರು ಗುತ್ತಿಗೆದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಗರದ ತಗ್ಗು ಪ್ರದೇಶದಲ್ಲಿರುವ 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮಳೆ ನೀರಿನಿಂದಾಗಿ ಮನೆಯಲ್ಲಿನ ಆಹಾರ ಪದಾರ್ಥಗಳು, ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗಿವೆ. ಅಡುಗೆ ಮಾಡಿಕೊಳ್ಳಲು ಜನರು ಪರಿತಪಿಸಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಕ್ಷೇತ್ರದ ಶಾಸಕ, ಅಬಕಾರಿ ಸಚಿವ ಕೆ.ಗೋಪಾಲಯ್ಯ ರಾತ್ರಿ ಕೆಲ ಮನೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಸಂತ್ರಸ್ತರಾದ 250ಕ್ಕೂ ಹೆಚ್ಚು ಕುಟುಂಬಗಳಿಗೆ ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿದರು.