ನವದೆಹಲಿ : ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧಿಸಲ್ಪಟ್ಟಿದ್ದ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದ ಇನ್ನೋರ್ವ ಆರೋಪಿ ಶಂತನು ಮುಲುಕ್ ಗೆ ಮಾ.9ರ ವರೆಗೆ ಬಂಧನದಿಂದ ರಕ್ಷಣೆ ನೀಡಲಾಗಿದೆ. ದೆಹಲಿ ನ್ಯಾಯಾಲಯ ಇಂದು ಈ ತೀರ್ಪು ನೀಡಿದೆ.
ಶಂತನು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು ಸಮಯ ಬೇಕು ಎಂದು ದೆಹಲಿ ಪೊಲೀಸರು ಹೇಳಿದುದರಿಂದ, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಆರೋಪಿ ಶಂತನುಗೆ ಬಂಧನದಿಂದ ರಕ್ಷಣೆ ನೀಡಿದ್ದಾರೆ.
ಮಾ.9ರ ವರೆಗೆ ಶಂತನು ವಿರುದ್ಧ ಪೊಲೀಸರು ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ನಿರ್ದೇಶಿಸಿದೆ. ಕೇಂದ್ರದ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸುವ ಸಲುವಾಗಿ, ಹೋರಾಟದ ರೂಪುರೇಷೆಯುಳ್ಳ ಆನ್ ಲೈನ್ ಟೂಲ್ ಕಿಟ್ ಸಿದ್ಧಪಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದಲ್ಲಿ ಶಂತನು, ದಿಶಾ ರವಿ, ನಿಕಿತಾ ಜಾಕೊಬ್ ವಿರುದ್ಧ ದೆಹಲಿ ಪೊಲೀಸರು ದೇಶದ್ರೋಹ ಮತ್ತಿತರ ಆರೋಪಗಳನ್ನು ದಾಖಲಿಸಿತ್ತು. ಈಗಾಗಲೇ ದಿಶಾ ರವಿಗೆ ಜಾಮೀನು ಮಂಜೂರು ಮಾಡಲಾಗಿದೆ.