ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡಿದ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ

Prasthutha|

ಬೆಂಗಳೂರು : ಹೊಸಕೋಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಬೆಂಬಲ ಪ್ರಕಟಿಸಿದರು. ಬೆಂಗಳೂರಿನಲ್ಲಿ ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರತ್ ಬಚ್ಚೇಗೌಡ ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಬಾಹ್ಯ ಬೆಂಬಲ ಪ್ರಕಟಿಸಿದರು.

- Advertisement -

ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇದು ಪಕ್ಷದ ಕಾರ್ಯಕ್ರಮ ಅಲ್ಲ, ಶಾಸಕಾಂಗ ಪಕ್ಷದ ಕಾರ್ಯಕ್ರಮ. ಕ್ಷೇತ್ರದ ಅಭಿವೃದ್ಧಿಗೆ ನೀವೆಲ್ಲರೂ ದುಡಿಯಬೇಕು. ಹೊಸಕೋಟೆ ಕ್ಷೇತ್ರಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದರು. ರಾಜ್ಯದಲ್ಲಿ ಸಂಪೂರ್ಣ ಆಡಳಿತ ಕುಸಿದಿದೆ. ಇದಕ್ಕೆ ಮುಕ್ತಿ ಕೊಡಬೇಕಾದರೆ ನಾವು ಹೋರಾಡಬೇಕು ಎಂದು ಅವರು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಈ ವೇಳೆ ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಸರಕಾರವೇ ಇಲ್ಲ. ಸರಕಾರ ಸಂಪೂರ್ಣ ಸತ್ತು ಹೋಗಿದೆ. ಸತ್ತ ಸರಕಾರದಿಂದ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಹಣ ಕೇಳಿದ್ರೆ ಕೊರೊನ ಕಾರಣ ಮುಂದೊಡ್ಡುತ್ತಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

- Advertisement -

ಈ ಸಂದರ್ಭ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಕೆ.ಜೆ. ಜಾರ್ಜ್ ಮತ್ತಿತರರು ಹಾಜರಿದ್ದರು.

Join Whatsapp