ಬೆಳಗಾವಿ: ರಾಜ್ಯದಲ್ಲಿ ಗುತ್ತಿಗೆ ಅವಧಿ ಮುಗಿದರೂ, ಹಣ ವಸೂಲಿ ಮಾಡುತ್ತಿರುವ ಟೋಲ್ ಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ವಿಧಾನ ಪರಿಷತ್ ಗೆ ಇಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರಿನಿಂದ ತುಮಕೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಅವಧಿ ಮುಗಿದಿದ್ದರೂ, ಟೋಲ್ ವಸೂಲಿ ಮಾಡಲಾಗುತ್ತಿದೆ. ಈ ಕುರಿತು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನ್ಯಾಯಾಲಯಕ್ಕೆ ಹೋಗಿದೆ ಎಂದರು.
ಆದರೆ, ಉತ್ತರಕ್ಕೆ ಪ್ರತಿಕ್ರಿಯಿಸಿದ ಕೆ.ಟಿ.ಶ್ರೀಕಂಠೇಗೌಡ, ಈ ವ್ಯಾಪ್ತಿಯ ಟೋಲ್ ಅವಧಿ ಮುಗಿದು ಆರು ತಿಂಗಳಾದರೂ, ಏಕೆ ಸುಲಿಗೆ ಮಾಡಲಾಗುತ್ತಿದೆ. ಇದನ್ನು ತೆರವು ಮಾಡಲು ಮುಂದಾಗಬೇಕು. ಒಂದು ದಿನಕ್ಕೆ 50 ಲಕ್ಷ ವಸೂಲಿ ಮಾಡಲಾಗುತ್ತಿದೆ ಎಂದು ಸದನದ ಗಮನ ಸೆಳೆದರು.
ಆಗ ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಒಂದು ದಿನಕ್ಕೆ 50 ಲಕ್ಷ ವಸೂಲಿ ಮಾಡಲಾಗುತ್ತಿದೆ ಎಂದರೆ ಗಂಭೀರ ವಿಚಾರ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸದನಕ್ಕೆ ಉತ್ತರಿಸಿ ಎಂದು ಸೂಚಿಸಿದಾಗ ಅದಕ್ಕೆ, ಸಚಿವರು ಒಪ್ಪಿಗೆ ಸೂಚಿಸಿದರು.