ಬೆಂಗಳೂರು: ನಾಡಿನೆಲ್ಲೆಡೆ ಇಂದು ಕ್ರಿಸ್ ಮಸ್ ಸಂಭ್ರಮ. ನಿನ್ನೆ ತಡರಾತ್ರಿಯಿಂದಲೇ ಎಲ್ಲೆಡೆ ಕ್ರಿಸ್ ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.
ಶಾಂತಿ, ಸೌಹಾರ್ದತೆಯ ಸಂಕೇತವಾಗಿ ಮಧ್ಯರಾತ್ರಿ 12ಕ್ಕೆ ಸರಿಯಾಗಿ ಪಟಾಕಿ ಸಿಡಿಸುವ ಮೂಲಕ ಕ್ರೈಸ್ತರು ಕ್ರಿಸ್ಮಸ್ ಹಬ್ಬವನ್ನು ಬರಮಾಡಿಕೊಂಡರು. ಅಲ್ಲದೆ, ಕ್ರೈಸ್ತರು ಚರ್ಚ್ಗಳಿಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಯೇಸುವಿಗೆ ನಮನ ಸಲ್ಲಿಸುತ್ತಿದ್ದಾರೆ.
ಕ್ರಿಸ್ಮಸ್ ಸಂದರ್ಭದಲ್ಲಿ ದಾನ ಮಾಡುವುದಕ್ಕೂ ವಿಶೇಷ ಮಹತ್ವವಿದೆ. ಪ್ರತಿಯೊಬ್ಬರು ತಮ್ಮ ಕೈಲಾದಷ್ಟು ದಾನಗಳನ್ನು ಮಾಡಬೇಕು. ಇಂಥ ಕಾರ್ಯಕ್ಕೆ ದೇವರ ಆಶೀರ್ವಾದ ಸದಾ ಇರುತ್ತದೆ ಎಂಬುದು ಕ್ರಿಶ್ಚಿಯನ್ನರ ಅಚಲ ನಂಬಿಕೆ.
ಚರ್ಚ್‌ಗಳಲ್ಲಿ ಪ್ರತ್ಯೇಕ ಪ್ರಾರ್ಥನೆಗಳು, ಮೆರವಣಿಗೆ ಮತ್ತು ಗೋದಲಿ, ಕ್ರಿಸ್ಮಸ್ ಟ್ರೀ, ಸ್ಟಾರ್‌ಗಳ ಪ್ರದರ್ಶನಗಳೊಂದಿಗೆ ಆಚರಣೆ ಮಾಡಲಾಗುತ್ತದೆ. ಸಾಂತಾಕ್ಲಾಸ್ ವೇಷಧಾರಿ, ಹಿರಿಯರು, ಪೋಷಕರು, ನೆರೆಹೊರೆಯವರು, ಸ್ನೇಹಿತರು ಮತ್ತು ಹಿತೈಷಿಗಳು ಮಕ್ಕಳಿಗೆ ಉಡುಗೊರೆಗಳನ್ನು ಕೊಡುತ್ತಾರೆ. ಈ ದಿನ ಮನೆಯಲ್ಲಿ ತಯಾರಿಸಿದ ಸಾಂಪ್ರದಾಯಿಕ ಕೇಕ್ ಮತ್ತು ಮಫಿನ್, ಬಗೆಬಗೆಯ ತಿಂಡಿಗಳು, ಭೋಜನ ಸವಿಯಲು ಮಕ್ಕಳಿಗೆ ಅವಕಾಶ ಸಿಗುತ್ತದೆ.