‘ To kill a mocking Bird ‘-“ಹಾಡುವ ಹಕ್ಕಿಯ ಕೊಲೆ’’ ಮೊದಲ ಸಂಪಾದಕೀಯದ ಶೀರ್ಷಿಕೆಯೇ ಗೌರಿಯ ಬದುಕಿನಲ್ಲಿ ನಡೆದು ಹೋಯಿತು!

Prasthutha|

‘ ಗೀವ್ ಮಿ ಒನ್ ಹಂಡ್ರೆಡ್ ರುಪೀಸ್ ಪ್ಲೀಸ್ ‘
ಗೌರಿ, ತಮ್ಮ ಕನ್ನಡ ಪತ್ರಿಕೋದ್ಯಮದ ಮೊದಲಿನ ಐದು ವರ್ಷಗಳಲ್ಲಿ ಈ ಮೇಲಿನ ಮಾತನ್ನು ಅನೇಕ ಬಾರಿ ಬಳಸಿದ್ದಿದೆ.
ಇದರರ್ಥ
ಅವರು ಯಾರನ್ನೋ ನೂರು ರೂಪಾಯಿ ಕೇಳಿದರೆಂದಲ್ಲ. ತಮಗೆ ಬಿಟ್ಟೂಬಿಡದೆ ಸಲಹೆ ನೀಡುತ್ತಿದ್ದವರು, ಬೇಕಿದೆಯೊ, ಬೇಡವೊ ಗಮನಿಸದೆ ಸಹಾಯ ಮಾಡಲು ಮುಂದಾಗುತ್ತಿದ್ದವರು. ಪತ್ರಿಕೆ ಹೇಗೆ ನಡೆಸಬೇಕೆಂದು ಕಿರಿಕಿರಿ ಎನಿಸುವಷ್ಟು ಮಾರ್ಗದರ್ಶನ ಮಾಡುವವರು… ಹೀಗೆ, ಗೌರಿ ತಾನು `ಲಂಕೇಶ್ ಪತ್ರಿಕೆ’ಗೆ 2000ನೇ ಇಸವಿಯ ಜನವರಿಯಿಂದ ಸಂಪಾದಕಿಯಾಗಿ ಬಂದಾಗ ತನ್ನನ್ನು ಸುತ್ತುವರಿಯುತ್ತಿದ್ದ ಹಿತೈಷಿಗಳ ಸಲಹೆಗಳೆಲ್ಲಾ ಬೋರ್ ಅನಿಸಿದಾಗ, ಕಿರಿಕಿರಿ ಉಂಟು ಮಾಡಿದಾಗ ಎದುರಿಗೆ ಕುಳಿತವರು ಹೇಳುವುದನ್ನೆಲ್ಲಾ ಕೇಳಿ ಕೊನೆಗೆ
‘ please give me one hundred rupees ‘
ಅನ್ನುತ್ತಿದ್ದರು.
ಬಂದವರು ಅದೇಕೆಂದು ಅರ್ಥವಾಗದೆ ಗೊಂದಲವಾಗುತ್ತಿದ್ದರು.
ಆಗ ಗೌರಿ ತಮ್ಮ ಮಾತಿನ ಪಜಲ್ ತಾನೇ ಬಿಡಿಸುವಂತೆ,
“ಅಲ್ಲಾ ಮಾರಾಯ, ನನಗೆ ಎಲ್ಲರ ಸಲಹೆ ಕೇಳಿಕೇಳಿ ಸಾಕಾಗಿದೆ. ಅದಕ್ಕೆ ‘ಒಂದು ಸಲಹೆ ಕೊಟ್ಟರೆ ಅದರ ಜೊತೆಗೆ ನನಗೆ ನೂರು ರೂಪಾಯಿನೂ ಕೊಡಬೇಕು ಅಂತ ಹೇಳ್ತಾ ಇದೀನಿ” ಎನ್ನುತ್ತಿದ್ದರು.

- Advertisement -

ಗೌರಿಯ ಮಾತು ಕೇಳಿ ಕೆಲವರು ನಕ್ಕು ಸುಮ್ಮನಾಗುತ್ತಿದ್ದರು. ಕೆಲವರಿಗೆ ಬೇಸರವಾಗಿದ್ದೂ ಇದೆ. ಈ `ಗೀವ್ ಮಿ ಹಂಡ್ರೆಸ್ ರುಪೀಸ್’ ಎನ್ನುವ ಗೌರಿಯ ಗುರಾಣೆಯ ಮಾತಿನ ಆಯುಧವು ಅವರು 2005ರಲ್ಲಿ ಸ್ವಂತ ಪತ್ರಿಕೆ ಲಾಂಚ್ ಮಾಡಿದ ಮೇಲೂ ಕೆಲಕಾಲ ಮುಂದುವರಿದಿತ್ತು.

- Advertisement -


ಒಂದು ದಿನ ಸಂಜೆ ಕಾಫಿ ಸಮಯದಲ್ಲಿ ನಾನು ಗೌರಿಯ ಚೇಂಬರಿಗೆ ಹೋದಾಗ ಅವರ ಸೊಗಸಾದ ರೋಸ್‌ವುಡ್ ಟೇಬಲ್ ಮೇಲೆ ಒಂದು ನೂರು ರೂಪಾಯಿಯ ನೋಟು ಹರಡಿಕೊಂಡು ಕುಳಿತಿತ್ತು.
ಗೌರಿ ಅದಕ್ಕೆ ವಿವರಣೆ ಕೊಡುತ್ತಾ
“ಈಗ ತಾನೆ ಬಂದು ಹೋದರಲ್ಲ ಅವರು ಕೊಟ್ಟ (ವಸೂಲಿ ಮಾಡಿದ) ಸಲಹೆಯ ಫೀಸ್ ಇದು” ಎಂದು ನಕ್ಕರು. ಅವರ ದನಿಯಲ್ಲಿ ಬೇಸರವಿತ್ತು.
ದಿನಕ್ರಮೇಣ ಆ ಸಲಹೆಗಾರರ ಅತ್ಯುತ್ಸಾಹವು ಹಿಂದೆ ಸರಿಯುತ್ತಾ, ಅದೇ ಬೆಂಬಲದ ದನಿಯಾಗಿ ಮೆಚ್ಚುಗೆಯ ಮಾತಾಗಿ ರೂಪಾಂತರಗೊಂಡವು.
ಲಂಕೇಶ್ ಪತ್ರಿಕೆಯಂತ ದೊಡ್ಡ ಇಮೇಜಿನ ಪತ್ರಿಕೆಯ ಸಂಪಾದಕಿಯಾಗಿ ಕನ್ನಡ ಪತ್ರಿಕೋದ್ಯಮಕ್ಕೆ ಕಾಲಿಟ್ಟಾಗ ಗೌರಿ ಲಂಕೇಶ್ ಹೆಸರು ಕೆಲವರಿಗೆ ಗೊತ್ತಿತ್ತು. ಆದರೆ ಗೌರಿಯಾಗಿ ಅವರ ಬಗ್ಗೆ ತಿಳಿದಿದ್ದ ಜನ ಕಡಿಮೆ ಇದ್ದರು.
ಗೌರಿ ಕನ್ನಡ ಪತ್ರಿಕೋದ್ಯಮಕ್ಕೆ ಕಾಲಿಟ್ಟಾಗ ಅವರಿಗೆ 38 ವರ್ಷ. ಅದಕ್ಕೂ ಮುನ್ನ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಅವರು ಹದಿನೈದು ವರ್ಷ ಕೆಲಸ ಮಾಡಿದ್ದರು. ದೆಹಲಿ ಮತ್ತು ಬೆಂಗಳೂರಿನಲ್ಲಿದ್ದುಕೊಂಡು ಕಲ್ಕತ್ತಾ ಮೂಲದ ಆನಂದ್ ಬಜಾಜ್ ಪತ್ರಿಕಾ ಸಮೂಹದ ಸಂಡೇ ವಾರ ಪತ್ರಿಕೆಗೆ, ನಂತರ ಟೈಮ್ಸ್ ಆಫ್ ಇಂಡಿಯಾ, ಈ ಟಿವಿ ಮುಂತಾದವುಗಳಲ್ಲಿ ಕೆಲಸ ಮಾಡಿದ್ದರು.
ಅವರಿಗೆ ಕನ್ನಡ ಪತ್ರಿಕೋದ್ಯಮದ ವ್ಯಾಪ್ತಿ, ವಿಸ್ತಾರವಾಗಲಿ, ಅದರ ಪರಂಪರೆ-ಪರಿಣಾಮಗಳ ಬಗ್ಗೆಯಾಗಲಿ ತಿಳಿದಿರಲಿಲ್ಲ. ತನ್ನ ತಂದೆ ಕರ್ನಾಟಕದಲ್ಲಿ ಓರ್ವ ಪ್ರಸಿದ್ಧ ಪತ್ರಕರ್ತ ಎಂಬುದಂತೂ ಗೌರಿಗೆ ಖಚಿತವಾಗಿ ಗೊತ್ತಿತ್ತು.
ಆದರೆ ಪಿ. ಲಂಕೇಶ್ರ ಹೆಸರು ಕರ್ನಾಟಕ ದಾಟಿದೊಡನೆಯೇ ದೆಹಲಿ ಇನ್ನಿತರ ದೊಡ್ಡ ನಗರಗಳಲ್ಲಿ ಪತ್ರಿಕಾ ವಲಯಗಳಿಗೂ ಸಹ ಅವರ ಹೆಸರು ತಿಳಿದಿರುವ ಅಥವಾ ಕೇಳಿಯೇ ಇರದ ಸಾದ್ಯತೆಗಳಿರುತ್ತಿದ್ದವು.

ಇದನ್ನಿಲ್ಲಿ ಏಕೆ ಹೇಳಬೇಕಾಗಿದೆಯೆಂದರೆ ಗೌರಿಯವರ ಹೆಸರಿನ ಜೊತೆಗೆ ಲಂಕೇಶ್ ಹೆಸರೂ ಸಹ ಇತ್ತಾದರೂ, ಗೌರಿಯ ಮೊದಲ ಹಂತದ ಇಂಗ್ಲಿಷ್ ಪತ್ರಿಕಾ ವೃತ್ತಿಯಲ್ಲಿ ಅವರ ಸ್ವಂತದ ಶ್ರಮ, ಪ್ರತಿಭೆ, ಐಡಿಯಾಗಳು ಅವರಿಗೊಂದು ಐಡೆಂಡಿಟಿ ತಂದುಕೊಟ್ಟಿದ್ದವು. ತಂದೆ ಪಿ. ಲಂಕೇಶ್ ಹೆಸರನ್ನು ಗೌರಿಯವರು ತಮ್ಮ ವೃತ್ತಿ ಜೀವನ ರೂಪಿಸಿಕೊಳ್ಳಲು ಆಧರಿಸಬೇಕಿರಲಿಲ್ಲ ಎಂಬುದು ಕಾಣುತ್ತಿತ್ತು. ನಾನು ಕಂಡಂತೆ ಗೌರಿ ಸಾಹಸ ಮನೋಭಾವದವರು adventure seeker ಎನ್ನುತ್ತಾರಲ್ಲ ಹಾಗೆ.
ಅವರು ಈಗ ಈಸೀ ಚೆಕ್ ಪತ್ರಕರ್ತೆಯಾಗಿರಲಿಲ್ಲ. ಬೆಂಗಳೂರಲ್ಲಿ ನೆಲೆಸಲು ನಿರ್ಧರಿಸಿ ಬರುವ ಮುನ್ನ ದೆಹಲಿ, ಫ್ರಾನ್ಸ್, ಅಮೆರಿಕೆಯಲ್ಲೂ ಇದ್ದು ಬಂದಿದ್ದರು. ಯೂರೋಪ್ ನ ಅನೇಕ ದೇಶಗಳನ್ನು ಸುತ್ತಿ ನೋಡಿದ್ದರು.
ಗೌರಿಯ ಹೆಸರಲ್ಲಿ ಲಿಂಗಾಯತ ಧರ್ಮದ ದೇವತೆಯೊಬ್ಬಳ ಸ್ತುತಿ ಇತ್ತಾದರೂ ಅವರೆಷ್ಟು ಮಾತ್ರಕ್ಕೂ ಸಂಪ್ರದಾಯಸ್ಥೆಯಾಗಿರಲಿಲ್ಲ.
“ನನ್ನ ಹೆಸರು ಗೌರಿ ಅಂತಿದ್ದದ್ದನ್ನು ನೋಡಿ, ಉದ್ದ ಕೂದಲು, ಕುಂಕುಮ, ಕೈಬಳೆ, ಸೀರೆಯ ಉಡುಗೆಯ ಕಲ್ಪನೆ ಬಹಳ ಜನರಿಗಿತ್ತು ಅನಿಸುತ್ತೆ, ಆದರೆ ಜೀನ್ಸ್, ಟೀ ಶರ್ಟ್, ಬಾಯ್ ಕಟ್, ಕೈಲಿ ಸಿಗರೇಟು, ಇಂಗ್ಲೀಷ್ ಮಾತು, ವೇಗದ ನಡಿಗೆ, ಇದನ್ನೆಲ್ಲಾ ನೋಡಿ ಕೆಲವರು ಕಕ್ಕಾಬಿಕ್ಕಿಯಾಗುತ್ತಿದ್ದರು’’ ಅಂತ ಗೌರಿಯೇ ನಗುತ್ತಾ ನನಗೆ ಹೇಳಿದ್ದುಂಟು.
ಹಾಗಂದ ಮಾತ್ರಕ್ಕೆ ಗೌರಿಗೆ ಬೆಂಗಳೂರಾಗಲಿ, ಕರ್ನಾಟಕವಾಗಲಿ ಅಪರಿಚಿತವೇನಲ್ಲ.
ಗೌರಿ ಡಿಗ್ರಿ ಓದಿದ್ದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ. ಅವರ ಕ್ಲಾಸ್ ಮೇಟ್ ಗಳ ಬಳಗವೂ ದೊಡ್ಡದಿತ್ತು. ನಂತರ ಅವರೆಲ್ಲಾ ವಿವಿಧ ಕ್ಷೇತ್ರಗಳಲ್ಲಿ ಚದುರಿ ಹೋದರು. ಆಗೆಲ್ಲಾ ಗೌರಿಯ ಒಡನಾಟವು ಅಪ್ಪರ್ ಮಿಡಲ್ ಕ್ಲಾಸ್ ಹಾಗೂ ಶ್ರೀಮಂತರ ವಲಯಗಳಲ್ಲಿ ತುಸು ಹೆಚ್ಚಿತ್ತು. ಅಂತವರಲ್ಲಿ ಪಿ. ಲಂಕೇಶರ ಬರಹಗಳಾಗಲಿ ಅಥವಾ ಪತ್ರಿಕೆಯಾಗಲಿ ಮಹತ್ತರ ಸಂಗತಿಯಾಗಿರಲು ಸಾಧ್ಯವಿರಲಿಲ್ಲ. ಆಗಿನ ಲಂಕೇಶ್ ಪತ್ರಿಕೆಯು ಜನಸಾಮಾನ್ಯರು, ರೈತರು, ಗೃಹಿಣಿಯರು, ವಿದ್ಯಾರ್ಥಿ ಯುವಜನರು, ಸಾಹಿತಿ-ಬುದ್ಧಿಜೀವಿಗಳು, ಅಧಿಕಾರಿ ರಾಜಕಾರಣಿ- ಹೀಗೆ ಸಮಾಜದ ಹಲವು ಸ್ತರಗಳಲ್ಲಿ ತನ್ನ ಓದುಗರನ್ನು ಪಡೆದುಕೊಂಡಿತ್ತು.


ಆ ಕಾಲದಲ್ಲಿ ಗೌರಿಗಿದ್ದ ಸ್ನೇಹ ವಲಯದ ಮತ್ತು ಲಂಕೇಶ್ ಪತ್ರಿಕೆಯ ಓದುಗ ವಲಯಗಳು ಬೇರೆ ಬೇರೆ ಪ್ರಪಂಚದಂತಿದ್ದವು ಎಂದುಕೊಳ್ಳಬಹುದು. ಹಾಗಾಗಿಯೇ ಬೆಂಗಳೂರಲ್ಲೇ ಹುಟ್ಟಿ ಬೆಳೆದು, ಓದಿ ಹೊರಗಿನ ಪ್ರಾಂತ್ಯಗಳಲ್ಲಿದ್ದು ಬಂದಿದ್ದ ಗೌರಿಗೆ ಲಂಕೇಶ್ ಪತ್ರಿಕೆಯ ಹಿತೈಷಿಗಳನ್ನು ಹಾಗೂ ಓದುಗರನ್ನು ಸಂಪಾದಕಿಯಾಗಿ ಮುಖಾಮುಖಿಯಾದಾಗ ಕೊಂಚ ಇರುಸುಮುರಿಸಿನ ಸನ್ನಿವೇಶಗಳು ಎದುರಾದವು.
ಕಾಳಜಿ, ಬೆಂಬಲದ ಮಾತುಗಳೊಂದಿಗೆ ಸಹಜವಾಗಿಯೇ ಸಲಹೆಗಳು ಬರತೊಡಗಿದಾಗ ಗೌರಿಗೆ ಕಿರಿಕಿರಿ ಅನಿಸಿತೇನೊ, ಹಾಗಾಗಿ ‘ಗೀವ್ ಮಿ ಹಂಡ್ರೆಡ್ ರುಪೀಸ್ ಪ್ಲೀಸ್’ ‘ ಎನ್ನುವ ಒಂದು ಸಣ್ಣ ಪ್ರತಿರೋಧ ತೋರಲು ಶುರು ಮಾಡಿದ್ದರು. ಈ ಮಾತಿನಲ್ಲಿ ಕೆಲವೊಮ್ಮೆ ಕಿಡಿಗೇಡಿತನ, ಸಿಟ್ಟು, ಬೇಸರ, ನಗು ವಿನಯದ ವಿಭಿನ್ನ ಶೇಡ್ ಗಳಿರುತ್ತಿದ್ದವು. ಈಗೊಮ್ಮೆ ಹಿಂತಿರುಗಿ ನೋಡಿದರೆ
‘ನಾನಿದನ್ನು ನಿಭಾಯಿಸಬಲ್ಲೆ. ನನ್ನ ಪಾಡಿಗೆ ಕೆಲಸ ಮಾಡಲು ಬಿಡಿ ಪ್ಲೀಸ್’ ಎನ್ನುವ ಬಾಯಿಬಿಟ್ಟು ಹೇಳಲಾಗದ ಮಾತೂ ಇತ್ತೆನಿಸುತ್ತದೆ.
ಪಿ. ಲಂಕೇಶರು ನಿರ್ಗಮಿಸಿದಾಗ ‘ಲಂಕೇಶ್ ಪತ್ರಿಕೆ’ಯ ಪ್ರಸಾರ ಸಂಖ್ಯೆ ಅಂದಾಜು ಮುವತ್ತು ಸಾವಿರದಷ್ಟಿತ್ತೆನಿಸುತ್ತದೆ. ಎರಡು ದಶಕಗಳ ಕಾಲದ ಪತ್ರಿಕೆಯ ವೈಭವದ ದಿನಗಳು ಮುಗಿದು ತಕ್ಕಮಟ್ಟಿಗೆ ಇನ್ನೂ ಪ್ರಭಾವ ಉಳಿಸಿಕೊಂಡೇ ಇತ್ತು.. ಬಹುಶಃ.
ಚುನಾವಣೆಗಳ ಮೇಲೆ ಪ್ರಭಾವ ಬೀರುವ, ಮುಖ್ಯಮಂತ್ರಿ, ಮಂತ್ರಿಗಳು ರಾಜೀನಾಮೆ ಕೊಡುವಂತ ಸನ್ನಿವೇಶ ಸೃಷ್ಟಿಸುವ ಲಕ್ಷಾಂತರ ಜನಸಾಮಾನ್ಯರ ಪ್ರತಿನಿಧಿಯಂತಿದ್ದ ಲಂಕೇಶ್ ಪತ್ರಿಕೆಯ ಸಂಪಾದಕರಾಗಿ ಮುನ್ನಡೆಸುವುದೆಂದರೆ ಸಹಜವಾಗಿಯೇ ಅವರ ನಿರೀಕ್ಷೆಯ ಭಾರ ಹೆಚ್ಚೇ ಇರುತ್ತದೆ.
ಲಂಕೇಶರು ಹೆಚ್ಚು ಮಾತನಾಡುತ್ತಿದ್ದವರಲ್ಲ. ಆದರೆ ಗೌರಿ ಮಾತಾಳಿ ಅರ್ಥಾತ್ ಭಿಡೆ ಇರದೆ ಪಟಪಟನೆ ಮಾತಾಡುವವರು. ಅದೇ ರೀತಿ ಮುಂದಿನ ಪರಿಣಾಮಗಳನ್ನು ಯೋಚಿಸದೆ ಆ ಕ್ಷಣಕ್ಕೆ ತನಗನಿಸಿದ್ದನ್ನು ಹೇಳಿಬಿಡುವ ಸದಾ ಉದ್ವೇಗದ ಮನಸ್ಥಿತಿ ಅವರದ್ದು. ಅದನ್ನು ಇಂಗ್ಲೀಷಿನಲ್ಲಿ ‘ Blurting ‘ಎನ್ನುತ್ತಾರೆ. ಇದನ್ನೇಕೆ ಹೇಳಿದೆನೆಂದರೆ ಕೆಲವೊಮ್ಮೆ ನಾವು ಇಂಗ್ಲಿಷಿನಲ್ಲಿ ಜಗಳವಾಡುವಾಗ ಅಥವಾ ಚರ್ಚಿಸುವಾಗ ಈ ಬ್ಲರ್ಟಿಂಗ್ ಪದ ಬಳಕೆಯಾಗುತ್ತಿತ್ತು.
ಆದರೆ ಈಗ್ಗೆ 22 ವರ್ಷಗಳ ಹಿಂದೆ ಗೌರಿಯವರು `ಲಂಕೇಶ್ ಪತ್ರಿಕೆ’ಗೆ ಹೊಸ ಸಂಪಾದಕಿಯಾಗಿ ಜವಾಬ್ದಾರಿ ಹೊತ್ತಾಗ ಅದುವರೆಗಿನ ಅವರ ಬಹಿರಂಗ ಜಗತ್ತು ಪೂರ್ಣ ನೆರವಾಗುತ್ತದೆ ಎಂದುಕೊಳ್ಳುವಂತಿರಲಿಲ್ಲ.
ಅಲ್ಲಿಂದಾಚೆಗೆ ಗೌರಿ ತನ್ನ ಅಂತರಂಗಕ್ಕಿಳಿದು ಬರೆಯಬೇಕಿತ್ತು. ‘happy go lucky ಎಂಬಂತಿದ್ದ ತನ್ನ ಬದುಕಿನ ಲಯವನ್ನು ಬದಲಿಸಿಕೊಳ್ಳಬೇಕಾದ ಸಂದರ್ಭ ಅದಾಗಿತ್ತು.
ಹೀಗೆ ಲಂಕೇಶ್ ಪತ್ರಿಕೆಗೆ ಗೌರಿ ಸಂಪಾದಕಿಯಾದಾಗ ನನಗೆ ನೆನಪಿರುವಂತೆ ಅವರು ಬರೆದ ಮೊದಲ
ಸಂಪಾದಕೀಯಗಳಲ್ಲಿ

‘ to kill a mocking bird’ ಎಂಬ ಬರಹ ಒಂದಾಗಿದೆ.
“ಹಾಡುವ ಹಕ್ಕಿಯ ಕೊಲೆ’’ ಎಂಬ ಶೀರ್ಷಿಕೆಯ ಗೌರಿಯ ಈ ಸಂಪಾದಕೀಯ ಬರಹ ಅದಾದ ಹದಿನೇಳು ವರ್ಷದ ನಂತರ ಅವರ ಜೀವನದಲ್ಲೇ ಸಂಭವಿಸಿತು.
ಗೌರಿಯ ಬಲಿದಾನವಾಯಿತು.
(ಮುಂದುವರೆಯುವುದು)

Join Whatsapp