ತಮಿಳುನಾಡು| ತಂದೆ-ಮಗನ ಕಸ್ಟಡಿ ಸಾವು ಪ್ರಕರಣ: 9 ಪೊಲೀಸ್ ಅಧಿಕಾರಿಗಳ ವಿರುದ್ಧ ಸಿಬಿಐ ಚಾರ್ಜ್‌ಶೀಟ್

Prasthutha|


ಚೆನ್ನೈ: ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದ್ದ ತಮಿಳುನಾಡಿನ ತಂದೆ-ಮಗನ ಕಸ್ಟಡಿ ಹಿಂಸೆ ಮತ್ತು ಸಾವು ಪ್ರಕರಣದಲ್ಲಿ ಮೂರು ತಿಂಗಳ ಬಳಿಕ ಸಿಬಿಐ ಒಂಬತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಆರೋಪ ಪಟ್ಟಿಯಲ್ಲಿ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗಿದೆ ಎಂಬುದಾಗಿ ಸಿಬಿಐ ಆರೋಪಿಸಿದೆ.

ಪೊಲೀಸ್ ಸಿಬ್ಬಂದಿಯಲ್ಲಿ ಇನ್ಸ್‌ಪೆಕ್ಟರ್, ಇಬ್ಬರು ಎಸ್‌ಐ, ಇಬ್ಬರು ಹೆಡ್ ಕಾನ್‌ಸ್ಟೇಬಲ್ ಮತ್ತು ನಾಲ್ವರು ಕಾನ್‌ಸ್ಟೇಬಲ್‌ ಸೇರಿದ್ದಾರೆ. ಅವರನ್ನು ತಮಿಳುನಾಡಿನ ಸಾಥನ್‌ಕುಲಂ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದು, ತನಿಖೆಯ ವೇಳೆ ನ್ಯಾಯಾಂಗ ಬಂಧನದಲ್ಲಿಡಲಾಗಿತ್ತು. ತನಿಖೆಯ ಸಮಯದಲ್ಲಿ ಮತ್ತೊಬ್ಬ ಆರೋಪಿಯಾಗಿದ್ದ ಸಬ್ ಇನ್ಸ್‌ಪೆಕ್ಟರ್ ಸಾವನ್ನಪ್ಪಿದ್ದಾನೆ.

ತಮಿಳುನಾಡಿನ ಕೋವಿಲ್ಪಟ್ಟಿಯಲ್ಲಿ ತಂದೆ-ಮಗ ಪಿ.ಜಯರಾಜ್ ಮತ್ತು ಜೆ. ಬೆನ್ನಿಕ್ಸ್ ರವರ ಕಸ್ಟಡಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಜುಲೈ 7 ರಂದು ಎರಡು ಪ್ರಕರಣಗಳನ್ನು ದಾಖಲಿಸಿತ್ತು. ರಾಜ್ಯ ಸರ್ಕಾರದ ಕೋರಿಕೆ ಮತ್ತು ಕೇಂದ್ರ ಸರ್ಕಾರದ ಅಧಿಸೂಚನೆಯ ಆಧಾರದ ಮೇಲೆ ಪ್ರಕರಣಗಳನ್ನು ದಾಖಲಿಸಿಕೊಂಡು ಈ ಬಗ್ಗೆ ತನಿಖೆ ನಡೆಸಲು ಸಿಬಿಐ ತಂಡ ಮಧುರೈನಲ್ಲಿ ಮೊಕ್ಕಾಂ ಹೂಡಿತ್ತು.



Join Whatsapp