ಸರಕಾರ ರಚಿಸಲು ವಿಫಲರಾಗಿ ನೇಮಿತ ಲೆಬನಾನ್ ಪ್ರಧಾನಿ ರಾಜೀನಾಮೆ
Prasthutha: September 26, 2020

ಬೀರತ್: ಸರಕಾರವನ್ನು ರಚಿಸುವುದರಲ್ಲಿ ಉಂಟಾದ ಬಿಕ್ಕಟ್ಟಿನಿಂದಾಗಿ ಲೆಬನಾನ್ ನ ನೇಮಿತ ಪ್ರಧಾನ ಮಂತ್ರಿ ಮುಸ್ತಫಾ ಆದಿಬ್ ರಾಜೀನಾಮೆ ಘೋಷಿಸಿದ್ದಾರೆ. ಇದು ಬಿಕ್ಕಟ್ಟಿನಿಂದ ಕೂಡಿದ ದೇಶದಲ್ಲಿ ಸ್ಥಿರತೆಯನ್ನು ಉಂಟುಮಾಡುವ ಫ್ರೆಂಚ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರೋನ್ ರ ಪ್ರಯತ್ನಗಳಿಗೆ ತೀವ್ರ ಹಿನ್ನಡೆಗೆ ಕಾರಣವಾಗಲಿದೆ.
ಸುಮಾರು ಒಂದು ತಿಂಗಳ ಹಿಂದೆ ಈ ಸ್ಥಾನಕ್ಕೆ ನೇಮಿತಗೊಂಡಿದ್ದ ಆದಿಬ್, ಅಧ್ಯಕ್ಷ ಮೈಕೆನ್ ಔನ್ ರೊಂದಿಗೆ ನಡೆಸಿದ ಸಭೆಯ ಬಳಿಕ ತಾನು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಶನಿವಾರದಂದು ತನ್ನ ದೂರದರ್ಶನ ಭಾಷಣದಲ್ಲಿ, ಸರಕಾರ ರಚಿಸುವ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ.
ಆಗಸ್ಟ್ 4 ರಂದು 200 ಮಂದಿಯ ಸಾವು ಮತ್ತು ಸಾವಿರಾರು ಮಂದಿ ತಮ್ಮ ಮನೆಗಳನ್ನು ಕಳೆದುಕೊಳ್ಳಲು ಕಾರಣವಾದ ಬೀರತ್ ಬಂದರು ಸ್ಫೋಟದ ಬಳಿಕ ಹಸನ್ ದಿಯಬ್ ನೇತೃತ್ವದ ಕಳೆದ ಸರಕಾರ ರಾಜೀನಾಮೆಯನ್ನು ನೀಡಿತ್ತು. ಆ ಬಳಿಕ ಬರ್ಲಿನ್ ಗೆ ಮಾಜಿ ರಾಯಭಾರಿಯಾಗಿದ್ದ ಆದಿಬ್ ರನ್ನು ಕ್ಯಾಬಿನೆಟ್ ರಚನೆಗಾಗಿ ನೇಮಿಸಲಾಗಿತ್ತು.
ಪ್ರಮುಖ ಶಿಯಾ ಪಕ್ಷಗಳಾದ ಇರಾನ್ ಬೆಂಬಲಿತ ಹಿಝ್ಬುಲ್ಲಾ ಮತ್ತು ಅದರ ಮಿತ್ರ ಪಕ್ಷ ಅಮನ್ ಮೂವ್ ಮೆಂಟ್ ಕ್ಯಾಬಿನೆಟ್ ಗೆ ಶಿಯಾ ಸಚಿವರನ್ನು ನೇಮಿಸಬೇಕೆಂದು ಪಟ್ಟು ಹಿಡಿದ ಕಾರಣ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಸರಕಾರ ರಚನೆಯು ಅಸಾಧ್ಯವಾಗಿದೆ.
