ನಾರದ ಸ್ಟಿಂಗ್ ಆಪರೇಷನ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ತೃಣಮೂಲ ಕಾಂಗ್ರೆಸ್ ನ ನಾಲ್ವರು ನಾಯಕರನ್ನು ಬಂಧಿಸಿದ ಸಿಬಿಐ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಸಿಬಿಐ ಕಚೇರಿಯ ಎದುರು ಟಿಎಂಸಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಕೊಲ್ಕತ್ತಾದ ನಿಝಾಮ್ ಪ್ಯಾಲೇಸ್ ನಲ್ಲಿರುವ ಸಿಬಿಐ ಕಚೇರಿಯ ಎದುರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಘೋಷಣೆ ಕೂಗಿದರು. ಈ ವೇಳೆ ಕಲ್ಲು ತೂರಾಟ ನಡೆದಿದ್ದು, ಕೇಂದ್ರೀಯ ಮೀಸಲು ಪಡೆಯ ಪೊಲೀಸರು ಲಾಠಿಚಾರ್ಜ್ ನಡೆಸಿ ಪ್ರತಿಭಟನಕಾರರನ್ನು ಚದುರಿಸಿದ್ದಾರೆ.
ಇದಕ್ಕೂ ಮೊದಲು ಸಿಬಿಐ ಅಧಿಕಾರಿಗಳು ಸಚಿವರಾದ ಫಿರ್ಹಾದ್ ಹಾಕಿಮ್, ಸುರ್ಬತಾ ಮುಖರ್ಜಿ, ಶಾಸಕ ಮದನ್ ಮಿತ್ರಾ, ಕೊಲ್ಕತ್ತಾ ಮಾಜಿ ಮೇಯರ್ ಸೋವನ್ ಚಟರ್ಜಿ ಅವರನ್ನು ಬಂಧಿಸಿದ್ದರು. ಪಕ್ಷದ ಮುಖಂಡರನ್ನು ಬಂಧಿಸಿದ ತಕ್ಷಣ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಬಿಐ ಕಚೇರಿಗೆ ಭೇಟಿ ನೀಡಿದ್ದರು.