ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ತಳ್ಳಾಟ, ಹೊಡೆದಾಟ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಪಶ್ಚಿಮ ಬಂಗಾಳದಲ್ಲಿ ನಡೆದ ರಾಮಪುರಹತ್ ಹತ್ಯಾಕಾಂಡದ ಬಗ್ಗೆ ಚರ್ಚೆಗೆ ಸುವೇಂದು ಅಧಿಕಾರಿ ಪಟ್ಟು ಹಿಡಿದಿದ್ದರು. ಆಗ ಬಿಜೆಪಿ ಮುಖ್ಯ ಸಚೇತಕ ಮನೋಜ್ ತಿಗ್ಗಾ ಮೇಲೆ ಹಲ್ಲೆ ನಡೆಸಲಾಗಿದೆ. ಈ ಗಲಾಟೆಯಲ್ಲಿ ಟಿಎಂಸಿ ಶಾಸಕ ಅಸೀತ್ ಮಜುಂದಾರ್ ಅವರ ಮೂಗಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿರೋಧ ಪಕ್ಷ ನಾಯಕ, ಬಿಜೆಪಿ ಮುಖಂಡ ಸುವೇಂದು ಅಧಿಕಾರಿಗೆ ಮೂಗಿದೆ ಬಲವಾಗಿ ಗುದ್ದಿದ್ದಾರೆ ಎಂದು ಅಸೀತ್ ಆರೋಪಿಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಸುವೇಂದು ಅಧಿಕಾರಿ ಸೇರಿದಂತೆ ಐವರು ಬಿಜೆಪಿ ಶಾಸಕರನ್ನು ಸದನದಿಂದ ಅಮಾನತುಗೊಳಿಸಲಾಗಿದೆ.
ಟಿಎಂಸಿ – ಬಿಜೆಪಿ ಶಾಸಕರು ಸದನದೊಳಗೆ ಹೊಡೆದಾಡುತ್ತಿರುವ ವೀಡಿಯೋವನ್ನು ಬಿಜೆಪಿಯ ಐಟಿ ಸೆಲ್ ಹಂಚಿಕೊಂಡಿದ್ದು, ಟಿಎಂಸಿ ಶಾಸಕರು ಬಿಜೆಪಿಯವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಆರೋಪವನ್ನು ನಿರಾಕರಿಸಿರುವ ಟಿಎಂಸಿ ನಾಯಕ, ಸಚಿವ ಫಿರ್ಹಾದ್ ಹಕೀಮ್ ಅವರು ಬಿಜೆಪಿಗರು ನಮ್ಮ ಶಾಸಕರ ಮೇಲೆ ವಿನಾ ಕಾರಣ ಹಲ್ಲೆ ನಡೆಸಿದ್ದು, ಈ ನಡೆಯನ್ನು ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ಶಾಸಕರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಸದನದಲ್ಲಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆದು, ಶಾಸಕರು ಪರಸ್ಪರರನ್ನು ಒದ್ದು, ಗುದ್ದಾಡಿಕೊಂಡ ಘಟನೆಯೂ ನಡೆಯಿತು.