ಭೋಪಾಲ್ : ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರಿಂದ ಮೂವರು ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ.
ಮುಂಜಾನೆ 3 ಗಂಟೆಯ ಸುಮಾರಿಗೆ ರಾಜ್ಯ ರಾಜಧಾನಿಯಿಂದ ಸುಮಾರು 160 ಕಿಮೀ ದೂರದಲ್ಲಿರುವ ಅರಾನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿ ದುಷ್ಕರ್ಮಿಗಳನ್ನು ಹಿಡಿಯಲು ಹೋದಾಗ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದರು.
ಪರಿಸ್ಥಿತಿಯ ಅವಲೋಕನಕ್ಕಾಗಿ ಮುಖ್ಯಮಂತ್ರಿಯವರು ತುರ್ತು ಸಭೆ ಕರೆದಿದ್ದಾರೆ.
“ಕೃಷ್ಣಮೃಗಗಳನ್ನು ಬೇಟೆಯಾಡಲು ಕೆಲವು ಕಳ್ಳ ಬೇಟೆಗಾರರು ಈ ಪ್ರದೇಶದಲ್ಲಿ ಬೀಡುಬಿಟ್ಟಿರುವ ಬಗ್ಗೆ ಪೊಲೀಸರಿಗೆ ನಿರ್ದಿಷ್ಟ ಸುಳಿವು ದೊರೆತ ನಂತರ ಅಧಿಕಾರಿಗಳನ್ನು ಗುನಾ ಜಿಲ್ಲೆಯ ಅರಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯಕ್ಕೆ ಕಳುಹಿಸಲಾಯಿತು. ಪೊಲೀಸ್ ಸಿಬ್ಬಂದಿ ಅವರನ್ನು ಎಲ್ಲಾ ಕಡೆಯಿಂದ ಸುತ್ತುವರೆದ ನಂತರ, ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು, ಇದರಲ್ಲಿ ಮೂವರು ಪೊಲೀಸರು ಸಾವನ್ನಪ್ಪಿದರು, ”ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.