ಯಾದಗಿರಿ: ಜನಾಶೀರ್ವಾದ ಯಾತ್ರೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಸ್ವಾಗತ ಕೋರಿದ ಪ್ರಕರಣದ ಸಂಬಂಧ ಕರ್ತವ್ಯ ಲೋಪ ತೋರಿದ ಆರೋಪದಲ್ಲಿ ಯಾದಗಿರಿ ಗ್ರಾಮಾಂತರ ಸಬ್ ಇನ್ಸ್ಪೆಕ್ಟರ್ ಹಾಗೂ ಮೂವರು ಪೇದೆಗಳನ್ನು ಅಮಾನತು ಮಾಡಲಾಗಿದೆ.
ಯಾದಗಿರಿ ಪಿಎಸ್ ಐ ಸುರೇಶ್ ಹಾಗೂ ಗ್ರಾಮಾಂತರ ಠಾಣೆಯ ಮೂವರು ಪೇದೆಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಯಾದಗಿರಿ ತಾಲೂಕಿನ ಯರಗೋಳದ ಬಳಿ ಬಿಜೆಪಿ ಜನಾಶೀರ್ವಾದ ಯಾತ್ರೆ ವೇಳೆ ನಿನ್ನೆ ಗಾಳಿಯಲ್ಲಿ ಗುಂಡುಹಾರಿಸಿ ಕೇಂದ್ರ ಸಚಿವ ಭಗವಂತ ಖೂಬಾಗೆ ಸ್ವಾಗತ ಕೋರಲಾಗಿತ್ತು. ಅವರ ಬೆಂಬಲಿಗರೇ ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಗತ ಕೋರಿದ್ದರು.
ಗಾಳಿಯಲ್ಲಿ ಗುಂಡು ಹಾರಿಸಲು ನಾಡ ಬಂದೂಕು ವ್ಯವಸ್ಥೆಯನ್ನು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಮಾಡಿದ್ದರು.
ಈ ಕುರಿತು ಪ್ರಕರಣ ದಾಖಲಾಗಿ ಮೂವರನ್ನು ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಯಾದಗಿರಿ ಗ್ರಾಮೀಣ ಠಾಣೆಯ ಸಿಬ್ಬಂದಿ ವೀರೇಶ, ಸಂತೋಷ ಹಾಗೂ ಮೆಹಬೂಬ್ ಅವರನ್ನು ಅಮಾನತುಗೊಳಿಸಲಾಗಿದೆ.