ಪಚ್ಚನಾಡಿ ತ್ಯಾಜ್ಯ ಸಮಸ್ಯೆ: 73.73 ಕೋಟಿ ರೂ.ಯ ವಿಸ್ತೃತ ಯೋಜನಾ ವರದಿಗೆ ಸಂಪುಟ ಅನುಮೋದನೆ

Prasthutha|

ಬೆಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗಿರುವ ಪಾರಂಪರಿಕ ತ್ಯಾಜ್ಯ ನಿರ್ವಹಣೆಗಾಗಿ ಸಲ್ಲಿಸಿರುವ 73.73 ಕೋಟಿ ರೂ.ಗಳ ವಿಸ್ತೃತ ಯೋಜನಾ ವರದಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಬಹುದಿನಗಳ ಸಮಸ್ಯೆಗೆ ಮುಕ್ತಿ ಸಿಗುವ ಸಾಧ್ಯತೆ ಇದೆ.

- Advertisement -


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ವಿವರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಮಂಗಳೂರು ಮಹಾನಗರ ವ್ಯಾಪ್ತಿಯ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗಿರುವ ಪಾರಂಪರಿಕ ತ್ಯಾಜ್ಯ (Legacy waste) ನಿರ್ವಹಣೆಗೆ 73.73 ಕೋಟಿ ರೂಗಳ ವಿಸ್ತೃತ ಯೋಜನಾ ವರದಿಗೆ ಸಂಪುಟ ಅನುಮೋದನೆ ನೀಡಿದೆ ಎಂದರು.


ಮಂಗಳೂರಿನಲ್ಲಿ 9 ಲಕ್ಷ ಟನ್ ತ್ಯಾಜ್ಯ ವಿಲೇವಾರಿ ಹೈಕೋರ್ಟ್ ಸೂಚನೆ ಮೇರೆಗೆ ಇಡೀ ಪ್ರದೇಶ ಶುಚಿಗೊಳಿಸಿ ಮತ್ತೆ ತ್ಯಾಜ್ಯ ಹಾಕಲು 73 ಕೋಟಿ ರೂ. ವೆಚ್ಚ ಮಾಡಲಾಗುವುದು. ಈಗಿರುವ ತ್ಯಾಜ್ಯದಲ್ಲಿಯೇ 22 ಕೋಟಿ ಬರಲಿದೆ. 30 ಕೋಟಿ ಪಾಲಿಕೆ ಉಳಿದ ಹಣವನ್ನು ಕೆಯುಐಡಿಎಸ್ ನಿಂದ ಭರಿಸಲಾಗುವುದು ಎಂದರು.

- Advertisement -


ಸುಮಾರು 2 ವರ್ಷಗಳಿಂದ ಪಚ್ಚನಾಡಿಯ ತ್ಯಾಜ್ಯ ಸಮಸ್ಯೆ ಮಂಗಳೂರು ಮಹಾನಗರ ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದೆ. ಪಚ್ಚನಾಡಿಯಲ್ಲಿ ತ್ಯಾಜ್ಯ ತುಂಬಿ ಇಡೀ ಪ್ರದೇಶ ತ್ಯಾಜ್ಯಮಯವಾಗಿದೆ. ಸುಮಾರು 2 ಕಿ.ಮೀ.ನಷ್ಟು ಪ್ರದೇಶಕ್ಕೆ ತ್ಯಾಜ್ಯ ಹರಡಿಕೊಂಡಿದ್ದು, ಸ್ಥಳೀಯ ನಿವಾಸಿಗಳನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ.


ಮಂಗಳೂರು ಪಾಲಿಕೆಯ 31ರಿಂದ 45ರವರೆಗಿನ 15 ವಾರ್ಡ್ ಗಳ ಪೈಕಿ 36 ವಾರ್ಡ್ ಪದವು (ಪೂರ್ವ)ಗೆ ಸೇರಿದ ಪಚ್ಚನಾಡಿಯ ಡಂಪಿಂಗ್ ಯಾರ್ಡ್ ಮಾಡಲಾಗಿದ್ದು, ಸುಮಾರು ಪ್ರತಿನಿತ್ಯ 250ರಿಂದ 300ರಷ್ಟು ಟನ್ ಕಸ ಸಂಗ್ರಹಿಸಲಾಗುತ್ತಿದೆ. ಸಂಸ್ಕರಿಸಿ ಉಳಿದ ಸುಮಾರು 50 ಟನ್ ನಷ್ಟು ತ್ಯಾಜ್ಯವನ್ನು ಪಚ್ಚನಾಡಿಯಲ್ಲಿ ಎಸೆಯಲಾಗುತ್ತದೆ. ಸುಮಾರು 77.93 ಎಕರೆ ಜಾಗವಿದ್ದು, ಇದರಲ್ಲಿ 10 ಎಕರೆ ವ್ಯಾಪ್ತಿಯಲ್ಲಿ ಕಸ ತುಂಬಿಸಿ, ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ. ಅದರ ಬಳಿಯಲ್ಲಿಯೇ ಈಗ ಸುಮಾರು 12 ಎಕರೆ ಜಾಗದಲ್ಲಿ 10 ವರ್ಷಗಳಿಂದ ತ್ಯಾಜ್ಯ ಸುರಿದು ಮಣ್ಣು ಹಾಕಲಾಗುತ್ತಿದೆ. ಇದರಿಂದ ಈ ಮಂದಾರ ಪ್ರದೇಶ ತ್ಯಾಜ್ಯ ರಾಶಿ ತಲೆಎತ್ತಿದೆ. ಇದೀಗ ಮಂಗಳೂರು ಪಾಲಿಕೆ ತ್ಯಾಜ್ಯ ನಿರ್ವಹಣೆಗಾಗಿ ಸಲ್ಲಿಸಿರುವ 73.73 ಕೋಟಿ ರೂ.ಗಳ ವಿಸ್ತೃತ ಯೋಜನಾ ವರದಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

Join Whatsapp