ನವದೆಹಲಿ : ಶೀಘ್ರದಲ್ಲೇ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲಾಗುತ್ತದೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಈವರೆಗೆ ಕೃತಕ ಬ್ಯಾರಿಕೇಡ್‌ಗಳನ್ನು ಮಾತ್ರವೇ ತೆಗೆದುಹಾಕಲಾಗಿದೆ. ಶೀಘ್ರದಲ್ಲೇ ಮೂರು ಕೃಷಿ ವಿರೋಧಿ ಕಾನೂನುಗಳನ್ನು ಸಹ ಹಿಂಪಡೆಯಲಾಗುತ್ತದೆ. ಅನ್ನದಾತರ ಸತ್ಯಾಗ್ರಹಕ್ಕೆ ಜಯವಾಗಲಿ” ಎಂದಿದ್ದಾರೆ.
ದೆಹಲಿ-ಉತ್ತರ ಪ್ರದೇಶ ಗಡಿಭಾಗ ಗಾಜಿಪುರದಲ್ಲಿ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಹಾಕಲಾಗಿದ್ದ ಬ್ಯಾರಿಕೇಡ್ ಹಾಗೂ ಮುಳ್ಳು ತಂತಿಗಳನ್ನು ಶುಕ್ರವಾರ ಪೊಲೀಸರು ತೆರವುಗೊಳಿಸಲು ಆರಂಭಿಸಿದರು.
ಟೆಕ್ರಿ ಸೇರಿದಂತೆ ಸಿಂಘು, ಗಾಜಿಪುರದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳವನ್ನು ಹೊರತುಪಡಿಸಿ ರಸ್ತೆಗಳಲ್ಲಿ ಹಾಕಿರುವ ಬ್ಯಾರಿಕೇಡ್‌ಗಳನ್ನು ತೆರೆದು, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಅ.21ರಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ತೆಗೆದು ಹಾಕುತ್ತಿದ್ದಾರೆ.