ಐಸಿಸಿ ಟಿ-20 ವಿಶ್ವಕಪ್: ಅಳಿವು ಉಳಿವಿನ ಪಂದ್ಯದಲ್ಲಿ ವಿಂಡೀಸ್’ಗೆ ರೋಚಕ ಗೆಲುವು

Prasthutha|

ಶಾರ್ಜಾ : ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ವೆಸ್ಟ್ ಇಂಡೀಸ್, ಬಾಂಗ್ಲಾದೇಶದ ವಿರುದ್ಧ 3 ರನ್’ಗಳ ರೋಚಕ ಗೆಲುವು ದಾಖಲಿಸಿದೆ.

- Advertisement -


ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯ ಅಂತಿಮ ಎಸೆತವರೆಗೂ ಪ್ರೇಕ್ಷಕರಿಗೆ ಥ್ರಿಲ್ ನೀಡಿತ್ತು. ಟಾಸ್ ಗೆದ್ದು ವಿಂಡೀಸ್’ಗೆ ಬ್ಯಾಟಿಂಗ್ ಬಿಟ್ಟುಕೊಟ್ಟಿದ್ದ ಬಾಂಗ್ಲಾ, ಪೊಲಾರ್ಡ್ ಪಡೆಯನ್ನು 142ರನ್’ಗಳಿಗೆ ನಿಯಂತ್ರಿಸಿತ್ತು. ಗೆಲುವಿಗಾಗಿ ಅಂತಿಮ ಎಸೆತದವರೆಗೂ ಹೋರಾಡಿದ ಬಾಂಗ್ಲನ್ನರು ಅಂತಿಮವಾಗಿ 3ರನ್’ಗಳಿಂದ ವೆಸ್ಟ್ ಇಂಡೀಸ್’ಗೆ ಶರಣಾದರು.


ಬಾಂಗ್ಲಾ ಗೆಲುವಿಗೆ ಅಂತಿಮ 3 ಓವರ್’ಗಳಲ್ಲಿ 30 ರನ್’ಗಳ ಆವಶ್ಯಕತೆಯಿತ್ತು. 18ನೇ ಓವರ್’ನಲ್ಲಿ 8 ರನ್’ಗಳಿಸಿದ ಬಾಂಗ್ಲಾ, ಅನುಭವಿ ಡೈನ್ ಬ್ರಾವೋ ಎಸೆದ 19 ನೇ ಓವರ್’ನ ಮೊದಲ ಎಸೆತದಲ್ಲಿ ನಾಯಕ ಮಹಮದುಲ್ಲಾ ಸಿಕ್ಸರ್ ಬಾರಿಸಿ ಅಬ್ಬರಿಸಿದ್ದರು. ಆದರೆ ಉಳಿದ 5 ಎಸೆತಗಳಲ್ಲಿ ಕೇವಲ 3 ರನ್ ಬಿಟ್ಟುಕೊಟ್ಟ ಬ್ರಾವೋ ಕೊನೇ ಎಸೆತದಲ್ಲಿ ಉತ್ತಮ ಫಾರ್ಮ್’ನಲ್ಲಿದ್ದ ಲಿಟನ್ ದಾಸ್ ವಿಕೆಟ್ ಪಡೆಯುವ ಮೂಲಕ ಮಿಂಚಿದರು.

- Advertisement -


ಅಂತಿಮ ಓವರ್’ನಲ್ಲಿ 13 ರನಗಳ ಗುರಿಯ ಸವಾಲನ್ನು ತಲುಪಲು ಬಾಂಗ್ಲಾ ಬ್ಯಾಟರ್’ಗಳಿಗೆ ರಸೆಲ್ ಅಡ್ಡಿಯಾದರು. ಕೇವಲ 10 ರನ್’ಬಿಟ್ಟುಕೊಟ್ಟ ರಸೆಲ್ ವೆಸ್ಟ್ ಇಂಡೀಸ್ ಗೆಲುವಿನ ರುವಾರಿಯಾದರು. ಅಂತಿಮ ಎಸೆತದಲ್ಲಿ 3 ರನ್ ಅಗತ್ಯವಿದ್ದಾಗ ಚುಕ್ಕಿ ಎಸೆತದ ಮೂಲಕ ರಸೆಲ್ ಸ್ಟಾರ್ ಆದರು.
ಟಾಸ್ ಗೆದ್ದು ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ್ದ ಬಾಂಗ್ಲಾ ಬೌಲರ್’ಗಳು ವೆಸ್ಟ್ ಇಂಡೀಸ್ ತಂಡದ ಬ್ಯಾಟರ್’ಗಳಿಗೆ ಕಡಿವಾಣ ಹಾಕಿದ್ದರು. ಆದರೆ ಕೊನೇ ಓವರ್’ಗಳಲ್ಲಿ ಆರ್ಭಟಿಸಿದ ನಿಕೊಲಸ್ ಪೂರನ್ ಕೇವಲ 22 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 1 ಬೌಂಡರಿಯ ಮೂಲಕ 40 ರನ್’ಗಳಿಸಿ ಬಾಂಗ್ಲಾ ಬೌಲರ್’ಗಳ ಬೆವರಿಳಿಸಿದರು. ರೋಸ್ಟನ್ ಚೆಸೆ 39 ರನ್’ಗಳಿಸಿ ನಿರ್ಗಮಿಸಿದರು. ಬಾಂಗ್ಲಾ ಪರ ಮೆಹ್ದಿ ಹಸನ್, ಮುಸ್ತಾಫಿಝುರ್ ರಹ್ಮಾನ್ ಹಾಗೂ ಶಕೀಬಲ್ ಹಸನ್ ತಲಾ 2 ವಿಕೆಟ್ ಪಡೆದು ಮಿಂಚಿದರು.
ಚೇಸಿಂಗ್’ನಲ್ಲಿ ಬಾಂಗ್ಲಾದ ಲಿಟನ್ ದಾಸ್ 44 ಹಾಗೂ ನಾಯಕ ಮೊಹಮದುಲ್ಲಾ 31 ರನ್’ಗಳಿಸಿದರು. ಜೇಸನ್ ಹೋಲ್ಡರ್ ಹಾಗೂ ಡೈನ್ ಬ್ರಾವೋ ತಲಾ ಎರಡು ವಿಕೆಟ್ ಪಡೆದರು. ನಿಕೊಲಸ್ ಪೂರನ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.


ವೆಸ್ಟ್ ಇಂಡೀಸ್ ವಿರುದ್ಧದ ಸೋಲು, ಟೂರ್ನಿಯಲ್ಲಿ ಬಾಂಗ್ಲಾದೇಶದ ಹ್ಯಾಟ್ರಿಕ್ ಸೋಲಾಗಿದೆ. ಆ ಮೂಲಕ ಗ್ರೂಪ್-1ರ ಅಂಕಪಟ್ಟಿಯಲ್ಲಿ ಬಾಂಗ್ಲಾ ಶೂನ್ಯ ಅಂಕಗಳೊಂದಿಗೆ ಕೊನೇಯ ಸ್ಥಾನದಲ್ಲಿದೆ. ತಲಾ ಎರಡು ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಕ್ರಮವಾಗಿ ಅಗ್ರ ಎರಡು ಸ್ಥಾನದಲ್ಲಿದೆ.

Join Whatsapp