ಸಿದ್ದಾಪುರ: ವಿದ್ಯುತ್ ಸಂಪರ್ಕವೇ ಇಲ್ಲದ 39 ದಲಿತ ಕುಟುಂಬಕ್ಕೆ ಪ್ರತೀ ತಿಂಗಳು 800 ರೂಪಾಯಿಯಿಂದ ಸಾವಿರಾರು ರೂಪಾಯಿ ಕರೆಂಟ್ ಬಿಲ್ ಬರುತ್ತಿದ್ದು, ಅಧಿಕಾರಿಗಳ ಈ ಎಡವಟ್ಟಿನಿಂದಾಗಿ ಕುಟುಂಬ ಕಂಗಾಲಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನಲ್ಲಿ ನಡೆದಿದೆ.
ದಲಿತ, ಹಿಂದುಳಿದ ರೈತರ ಅಭಿವೃದ್ಧಿಗೆಂದೇ ರಾಜ್ಯದಲ್ಲಿ ಗಂಗಾ ಕಲ್ಯಾಣ ಯೋಜನೆ ಜಾರಿಗೆ ತರಲಾಗಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಮೂರು ವರ್ಷಗಳ ಹಿಂದೆಯೇ ಕೊಳವೆ ಬಾವಿ ಕೊರೆಯಲಾಗಿದೆ. ನಾಮಕಾವಸ್ಥೆಗೆ ಮೋಟರ್ ಇಳಿಸಲಾಗಿದ್ದು, ವಿದ್ಯುತ್ ಸಂಪರ್ಕವನ್ನೇ ಕಲ್ಪಿಸಿಲ್ಲ. ಆದರೂ 39 ಫಲಾನುಭವಿಗಳಿಗೂ ಪ್ರತೀ ತಿಂಗಳು ಕನಿಷ್ಠ 600 ರೂಪಾಯಿಯಿಂದ 1 ಸಾವಿರ ರೂಪಾಯಿ ಬಿಲ್ ಬರುತ್ತಿದೆ ಎಂದು ವರದಿಯಾಗಿದೆ.
ಕಳೆದ ಮೂರು ವರ್ಷಗಳಿಂದ ಇದೇ ರೀತಿಯಾಗಿದ್ದು ಇದೀಗ ಬಿಲ್ಲಿನ ಮೊತ್ತ 9 ರಿಂದ 11 ಸಾವಿರಕ್ಕೆ ಬಂದು ನಿಂತಿದೆ. ಇದು ‘ನಾವು ಏತಕ್ಕಾದರೂ ಸರ್ಕಾರದ ಸೌಲಭ್ಯವನ್ನು ಪಡೆದುಕೊಂಡೆವೋ’ ಎಂದು ಗಂಗಾಕಲ್ಯಾಣ ಯೋಜನೆಯ ಫಲಾನುಭವಿಗಳು ಕಂಗೆಡುವಂತೆ ಮಾಡಿದೆ.
ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡರೇಷ್ಮೆ, ಚಿಕ್ಕರೇಷ್ಮೆ, ದಿಡ್ಡಳ್ಳಿ, ಕೆಸವಿನಕೆರೆ ಸೇರಿದಂತೆ 7 ಕ್ಕೂ ಹೆಚ್ಚು ಹಾಡಿಗಳ ಆದಿವಾಸಿ ಬುಡಕಟ್ಟು ಸಮುದಾಯದ 39 ಫಲಾನುಭವಿಗಳಿಗೆ ಅಧಿಕಾರಿಗಳು ಇಂತಹ ದುಃಸ್ಥಿತಿ ತಂದೊಡ್ಡಿದ್ದಾರೆ. ಕೆಸವಿನಕೆರೆಯ ಮೋಟ ಎಂಬ ಫಲಾನುಭವಿಗೆ ಇದೀಗ 9216 ರೂಪಾಯಿ ಒಟ್ಟು ವಿದ್ಯುತ್ ಶುಲ್ಕ ಬಾಕಿ ಇದ್ದು ನಿತ್ಯ ಕೂಲಿ ಕೆಲಸ ಮಾಡಿ ಬದುಕುವ ಆದಿವಾಸಿ ಸಮುದಾಯದ ಮೋಟ ಅವರಿಗೆ ಇದನ್ನು ಬರಿಸುವುದಾದರೂ ಹೇಗೆ ಎನ್ನೋ ಚಿಂತೆ ಎದುರಾಗಿದೆ. ಇದೇ ಹಾಡಿಯ ಮತ್ತೊಬ್ಬ ಮಲ್ಲ ಎಂಬುವರ ಸ್ಥಿತಿಯೂ ಇದೇ ರೀತಿಯಾಗಿದೆ. ಮಲ್ಲ ಅವರಿಗೆ ಬರೋಬ್ಬರಿ 11302 ರೂಪಾಯಿ ವಿದ್ಯುತ್ ಬಿಲ್ಲು ಬಂದಿದೆ. ದಿಡ್ಡಳ್ಳಿಯ ಮುತ್ತಮ್ಮ ಎಂಬುವರಿಗೂ 10620 ರೂಪಾಯಿ ವಿದ್ಯುತ್ ಬಿಲ್ಲು ಬಂದಿದೆ.
ವಿದ್ಯುತ್ ಸಂಪರ್ಕವೇ ಇಲ್ಲದಿದ್ದರೂ ವಿದ್ಯುತ್ ಬಿಲ್ಲು ಕೊಡುತ್ತಿರುವುದು ಹೇಗೆ ಎನ್ನೋದು ಜನರಿಗೆ ಅಚ್ಚರಿಯಾಗಿದ್ದು, ಅವರನ್ನು ಸಿಟ್ಟಿಗೇಳುವಂತೆ ಮಾಡಿದೆ. ಮೂರು ವರ್ಷದ ಹಿಂದೆ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡಿ ಕೊಳವೆ ಬಾವಿಗಳನ್ನು ಕೊರೆಯಲಾಗಿತ್ತು. ಕೆಲವು ತಿಂಗಳಲ್ಲೇ ಮೋಟರ್, ಅಳವಡಿಸಲಾಯಿತು. ಅದು ಬಿಟ್ಟರೆ ಇದುವರೆಗೆ ವಿದ್ಯುತ್ ಲೈನ್ ಎಳೆದಿಲ್ಲ, ಮೀಟರ್ ಬೋರ್ಡ್ ಕೂಡ ಅಳವಡಿಸಿಲ್ಲ. ಒಂದೆರಡು ಎಕರೆ ಜಮೀನು ಹೊಂದಿರುವ ನಾವು ನೀರಾವರಿ ವ್ಯವಸ್ಥೆಯಾದಲ್ಲಿ ಏನಾದರೂ ಬೆಳೆಗಳನ್ನು ಬೆಳೆದು ನಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳೋಣ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಅಧಿಕಾರಿಗಳು ಮತ್ತು ಸರ್ಕಾರಗಳು ಸೇರಿ ಗಾಯದ ಮೇಲೆ ಬರೆ ಎಳೆದಂತೆ ಮಾಡಿದ್ದಾರೆ ಎನ್ನೋದು ಫಲಾನುಭವಿಗಳ ಆಕ್ರೋಶ.
ಈ ಕುರಿತು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಗಂಗಾ ಕಲ್ಯಾಣ ವಿಶೇಷ ಸದನ ಸಮಿತಿಯ ಅಧ್ಯಕ್ಷ ಡಾ. ವೈ.ಎ ನಾರಾಯಣಸ್ವಾಮಿ ತಂಡ ಕೊಡಗು ಜಿಲ್ಲೆಗೆ ಆಗಮಿಸಿತ್ತು. ಸಮಿತಿಯು ಫಲಾನುಭವಿಗಳ ಜಮೀನುಗಳಿಗೆ ಹೋಗಿ ಪರಿಶೀಲನೆ ಮಾಡಬೇಕಾಗಿತ್ತು. ಆದರೆ ಕೇವಲ ಜಿಲ್ಲಾ ಪಂಚಾಯಿತಿಯಲ್ಲಿ ಸಭೆ ನಡೆಸಿ ಫಲಾನುಭವಿಗಳನ್ನೇ ಪಂಚಾಯಿತಿಗೆ ಕರೆಸಿಕೊಂಡು ಮಾಹಿತಿ ಪಡೆದು ವಾಪಸ್ಸಾಯಿತು. ಈ ಕುರಿತು ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ತಿನ ಸದನ ಸಮಿತಿ ಅಧ್ಯಕ್ಷ ಡಾ.ವೈ.ಎ ನಾರಾಯಣಸ್ವಾಮಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದಿದ್ದೇನೆ. ಅರಣ್ಯದೊಳಗೆ ವಿದ್ಯುತ್ ಲೈನ್ ಹಾದು ಹೋಗಬೇಕಾಗಿರುವುದರಿಂದ ವಿದ್ಯುತ್ ಸಂಪರ್ಕ ಕೊಡಲು ಸಾಧ್ಯವಾಗಿಲ್ಲ ಎನ್ನೋದು ಗೊತ್ತಾಗಿದೆ.
ಹಾಗಾದರೆ ಕೊಳವೆ ಬಾವಿ ಕೊರೆಸುವಾಗ ಈ ಸಮಸ್ಯೆ ಸಂಬಂಧಿಸಿದ ಅಧಿಕಾರಿಗಳಿಗೆ ಗೊತ್ತಿರಲಿಲ್ಲವೇ.? ಇದನ್ನು ಸರ್ಕಾರದ ಗಮನಕ್ಕೆ ತಂದು ಸರಿಪಡಿಸಲಾಗುವುದು ಎಂದರು. ಇನ್ನು ಅಷ್ಟೊಂದು ಪ್ರಮಾಣದ ವಿದ್ಯುತ್ ಬಿಲ್ಲು ಬಂದಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ಈ ಸಮಸ್ಯೆಯನ್ನು ಬಗೆಹರಿಸುವಂತೆ ಕೆಇಬಿ ಮತ್ತು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದಿದ್ದಾರೆ. ಆದರೆ ನಮಗೆ ಸೌಕರ್ಯ ಒದಗಿಸಬೇಕಾದ ಅಧಿಕಾರಿಗಳು ನಮ್ಮನ್ನು ತೊಂದರೆಗೆ ಸಿಲುಕಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.