►ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ
ಮೈಸೂರು: ಸಿಎಂ ರಾಜೀನಾಮೆಗೆ ಒತ್ತಾಯಿಸಿ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ತಿರುಗೇಟು ನೀಡಲು ಕಾಂಗ್ರೆಸ್ ನಿಂದ ಮೈಸೂರಿನಲ್ಲಿ ಶುಕ್ರವಾರ ಕಾಂಗ್ರೆಸ್ ಜನಾಂದೋಲನ ಸಭೆ ನಡೆದಿದ್ದು, ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಮಹಾರಾಜ ಕಾಲೇಜಿನಲ್ಲಿ ನಡೆದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಈ ಬಂಡೆ ಸಿದ್ದರಾಮಯ್ಯ ಜೊತೆಗಿದೆ. ನನ್ನ ಜೊತೆ 136 ಮಂದಿ ಶಾಸಕರಿದ್ದಾರೆ. ನಿಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವಿಲ್ಲ ಎಂದು ದೋಸ್ತಿ ನಾಯಕರ ವಿರುದ್ಧ ಗುಡುಗಿದ್ದಾರೆ.
ಏ ಕುಮಾರಸ್ವಾಮಿ, ಏ ಅಶೋಕಾ, ಏ ವಿಜಯೇಂದ್ರ ನಿಮಗೆ ಸಿದ್ದರಾಮಯ್ಯನವರ ರಾಜೀನಾಮೆ ಬೇಕಾ? ನನ್ನನ್ನು ಮಾಧ್ಯಮದವರು ಬಂಡೆ ಎಂದು ಹೇಳಿದರು. ನಮ್ಮ ಸರ್ಕಾರವನ್ನು 10 ತಿಂಗಳಲ್ಲಿ ತೆಗೆಯುತ್ತೇವೆ ಎಂದು ಹುನ್ನಾರ ಮಾಡುತ್ತಿದ್ದಾರೆ. ನಮ್ಮ ಯೋಜನೆಗಳ ರಕ್ಷಣೆಗೆ ಈ ಹೋರಾಟ ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಜನರು ಅಧಿಕಾರಕ್ಕೆ ಬಂದ ಹಾಗೆ. ನಮ್ಮ ಜನಾಂದೋಲನ ರಾಜ್ಯದ, ಸಂವಿಧಾನದ ರಕ್ಷಣೆಗಾಗಿ. ಕುಮಾರಸ್ವಾಮಿ ನಿನ್ನ ಅಧ್ಯಕ್ಷತೆಯಲ್ಲಿ ಜೆಡಿಎಸ್ 19 ಸೀಟ್ ಗೆದ್ದಿದೆ. ಈ ಡಿಕೆ ಶಿವಕುಮಾರ್ ನೇತೃತ್ವದಲ್ಲಿ 136 ಸ್ಥಾನ ಗೆದ್ದಿದೆ. ಬ್ರಿಟಿಷರಿಂದ ಕಾಂಗ್ರೆಸ್ ತೆಗೆಯಲು ಆಗಲಿಲ್ಲ. ನೀನು ಎರಡು ಜನ್ಮ ಎತ್ತಿದರೂ ನಮ್ಮನ್ನ ತೆಗೆಯಲು ಆಗುವುದಿಲ್ಲ ಕುಮಾರಸ್ವಾಮಿ ಎಂದು ಏಕವಚನದಲ್ಲೇ ಹರಿಹಾಯ್ದರು.