►ಕೇರಳ ಸಿಎಂಗೆ ಸುಕೇಶ್ ಚಂದ್ರಶೇಖರ್ ಪತ್ರ
ನವದೆಹಲಿ: 200 ಕೋಟಿ ರೂಪಾಯಿ ಸುಲಿಗೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸುಕೇಶ್ ಚಂದ್ರಶೇಖರ್, ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದ ನಂತರ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ 15 ಕೋಟಿ ರೂಪಾಯಿಗಳನ್ನು ಸ್ವೀಕರಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಸುಕೇಶ್ ಚಂದ್ರಶೇಖರ್ ಈಗ ನವದೆಹಲಿಯ ಮಂಡೋಲಿ ಜೈಲಿನಲ್ಲಿದ್ದಾರೆ.
ಕೇರಳದಲ್ಲಿ ನಡೆದಿರುವ ಭೂಕುಸಿತದಿಂದ ತೀವ್ರ ದುಃಖಿತನಾಗಿದ್ದು, ಅಗತ್ಯವಿರುವ ಸಮಯಲ್ಲಿ ಸೂಕ್ತ ನೆರವು ನೀಡಲು ಸಿದ್ಧ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರ ಬರೆದಿರುವುದನ್ನು ಅವರ ಪರ ವಕೀಲ ಅನಂತ್ ಮಲಿಕ್ ಕೂಡ ಖಚಿತಪಡಿಸಿದ್ದಾರೆ.
“ಇಂದು ನನ್ನ ಪ್ರತಿಷ್ಠಾನದಿಂದ ಪರಿಹಾರ ನಿಧಿಗೆ 15 ಕೋಟಿ ರೂಪಾಯಿ ದೇಣಿಗೆ ಸ್ವೀಕರಿಸಲು ನಾನು ಈ ಮೂಲಕ ವಿನಂತಿಸುತ್ತಿದ್ದೇನೆ. ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಯ ಮೂಲಕ ಹಣ ನೀಡುತ್ತೇನೆ. ಈ ಕೊಡುಗೆಯನ್ನು ಹೊರತುಪಡಿಸಿ, ನಾನು ಸಂತ್ರಸ್ತರಿಗೆ ತಕ್ಷಣವೇ 300 ಮನೆಗಳನ್ನು ನಿರ್ಮಿಸಲು ಹೆಚ್ಚಿನ ಕೊಡುಗೆ ನೀಡಲು ಸಿದ್ಧ” ಎಂದು ಪತ್ರದಲ್ಲಿ ತಿಳಿಸಲಾಗಿದೆ.