ಕಮಿಷನ್ ಗಾಗಿ ಸರ್ಕಾರವನ್ನು ತಳ್ಳುತ್ತಿದ್ದಾರೆ: ಮಾಧುಸ್ವಾಮಿ ಹೇಳಿಕೆಗೆ ಎಂ. ಲಕ್ಷ್ಮಣ ಟಾಂಗ್

Prasthutha|

ಮೈಸೂರು : ಎಂಟು ತಿಂಗಳಿದೆ ಸರ್ಕಾರವನ್ನು ತಳ್ಳುತ್ತಿದ್ದೇವೆ ಎಂಬ ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆಗೆ ಟಾಂಗ್ ನೀಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ,
ಸಚಿವರು ಹಣ ಮಾಡುವ ಕೆಲಸದಲ್ಲಿ ತೊಡಗಿದ್ದು, ಕಮಿಷನ್ ಪಡೆಯಲು ಸರ್ಕಾರವನ್ನು ತಳ್ಳುತ್ತಿದ್ದಾರಷ್ಟೆ ಎಂದು ಟೀಕಿಸಿದ್ದಾರೆ.

- Advertisement -

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಡೀತಾ ಇಲ್ಲ. ಮ್ಯಾನೇಜ್‌ ಮಾಡ್ತಾ ಇದ್ದೀವಷ್ಟೇ ಎಂಬ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆಯು ಸಂಪೂರ್ಣ ಸತ್ಯವಾದುದು. ಈ ಸರ್ಕಾರವು ಎಲ್ಲ ರಂಗಗಳಲ್ಲೂ ಸಂಪೂರ್ಣ ವಿಫಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

16 ಜಿಲ್ಲೆಗಳಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಆ ಸಂತ್ರಸ್ತರಿಗೆ ಸರ್ಕಾರ ಸ್ಪಂದಿಸಲಿಲ್ಲ. ಆಡಳಿತ ಯಂತ್ರ ಸತ್ತು ಹೋಗಿದೆ ಎಂದು ಆರೋಪಿಸಿದರು.

- Advertisement -

ಹಿಂದೂ-ಮುಸ್ಲಿಮರನ್ನು ‌ಎತ್ತಿ‌ ಕಟ್ಟಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕೋಮು ಗಲಭೆ ನಡೆಯುವಂತೆ ಹುನ್ನಾರ ನಡೆಸಿ ಲಾಭ ಮಾಡಿಕೊಳ್ಳಲು ಯತ್ನಿಸಲಾಗುತ್ತಿದೆ. ವ್ಯವಸ್ಥಿತ ಸಂಚು ನಡೆಸಲಾಗುತ್ತಿದೆ. ಹೀಗಾಗಿ, ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿಯಾದ ಮೇಲೆ ಯಾವ ಯೋಜನೆ ಕೊಟ್ಟಿದ್ದೀರಿ ಎನ್ನುವುದನ್ನು ಬಸವರಾಜ ಬೊಮ್ಮಾಯಿ ತಿಳಿಸಬೇಕು ಎಂದು ಸವಾಲು ಹಾಕಿದರು.

ಸಾವರ್ಕರ್ ಮೀರ್ ಸಾಧಕ್ ಕೆಲಸ‌ ಮಾಡಿದ್ದರಿಂದ ಅವರಿಗೆ ಬ್ರಿಟಿಷರು ಪಿಂಚಣಿ ಕೊಡುತ್ತಿದ್ದರು ಎಂದು ಆರೋಪಿಸಿದರು.

ಲೋಕಾಯುಕ್ತಕ್ಕೆ ವರದಿ ‌ಸಲ್ಲಿಸುವ ಅಧಿಕಾರವಷ್ಟೆ ಇತ್ತು. ಆದ್ದರಿಂದ ಸಿದ್ದರಾಮಯ್ಯ ಅವರು ಎಸಿಬಿ ಸ್ಥಾಪಿಸಿದರು. ಆದರೆ, ಲೋಕಾಯುಕ್ತ‌ವನ್ನು ಮುಚ್ಚಲಿಲ್ಲ.‌ ಬಿಜೆಪಿ ಸರ್ಕಾರವು ಎಸಿಬಿಯನ್ನು ಬಲಪಡಿಸದೆ ಭ್ರಷ್ಟಾಚಾರ, ವಸೂಲಾತಿ ಕೇಂದ್ರವನ್ನಾಗಿ ಮಾಡಿಕೊಂಡಿತು ಎಂದರು.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಮೊದಲಾದ ನಾಯಕರ ಬಗ್ಗೆ ಸಾಮಾಜಿಕ ಕಾರ್ಯಕರ್ತ ಏಕವಚನ ಬಳಸುವುದು ಸರಿಯಲ್ಲ. ಪ್ರಚಾರದ ಗೀಳಿಗಾಗಿ ಮನಬಂದಂತೆ ಮಾತನಾಡಬಾರದು. ನಾಲಿಗೆಯ ಮೇಲೆ ಹಿಡಿತವಿಟ್ಟುಕೊಳ್ಳಬೇಕು. ಸಮಾಜಕ್ಕೆ ಏನೂ ಕೊಡುಗೆ ನೀಡದೆ ಆರೋಪಿಸುವುದು ಸರಿಯಲ್ಲ. ಏಕವಚನದಲ್ಲಿಯೇ ಮಾತು ಮುಂದುವರಿಸಿದರೆ ಸಹಿಸಿಕೊಳ್ಳಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.



Join Whatsapp