ಅತ್ಯಾಚಾರಿಗಳನ್ನು ಹೂ ಹಾರ ಹಾಕಿ ಸ್ವಾಗತಿಸಿದ್ದೂ ತಪ್ಪಲ್ವಂತೆ
ನವದೆಹಲಿ: ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಕೊಲೆ ಮತ್ತು ಸಾಮೂಹಿಕ ಅತ್ಯಾಚಾರಗೈದು ಜೀವಾವಧಿ ಶಿಕ್ಷೆಗೆ ಗುರಿಯಾಗಿ, ಇದೀಗ ಶಿಕ್ಷೆ ರಿಯಾಯಿತಿ ಮೇಲೆ ಹೊರ ಬಂದಿರುವ 11 ಮಂದಿ ಅಪರಾಧಿಗಳ ಬಿಡುಗಡೆಗೆ ಬೆಚ್ಚಿ ಬೀಳಿಸುವ ಕಾರಣವನ್ನು ಗೋದ್ರಾ ಬಿಜೆಪಿ ಶಾಸಕರು ಹೇಳಿದ್ದಾರೆ.
‘ಅವರು ಬ್ರಾಹ್ಮಣರಾಗಿದ್ದು, ಉತ್ತಮ ಸಂಸ್ಕಾರ ಉಳ್ಳವರಾಗಿದ್ದಾರೆ’ ಎಂದು ಅತ್ಯಾಚಾರಿಗಳನ್ನು ಬಹಿರಂಗವಾಗಿಯೇ ಸಮರ್ಥಿಸಿದ್ದಾರೆ ಗೋದ್ರಾ ಶಾಸಕ ಸಿ.ಕೆ ರೌಲ್ಜಿ.
ಗೋದ್ರಾ ಜಿಲ್ಲಾಧಿಕಾರಿ ನೇತೃತ್ವದ
ಅಪರಾಧಿಗಳ ಬಿಡುಗಡೆಗೆ ಶಿಫಾರಸ್ಸು ಮಾಡಿದ ಸಮಿತಿಯಲ್ಲಿ ಶಾಸಕ ರೌಲ್ಜಿ ಕೂಡಾ ಸದಸ್ಯರಾಗಿದ್ದರು.
‘ಮೋಜೋ ಸ್ಟೋರಿ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಅವರು ಅಂದು ಅಪರಾಧ ಎಸಗಿದ್ದಾರೋ ಇಲ್ಲವೋ ಎಂದು ನನಗೆ ಗೊತ್ತಿಲ್ಲ. ಆದರೆ ಜೈಲಿನಲ್ಲಿ ಅವರ ವರ್ತನೆ ಉತ್ತಮವಾಗಿತ್ತು ಎಂದು ಜೈಲರ್ ಮೂಲಕ ತಿಳಿದು ಬಂತು. ಅವರ ಕುಟುಂಬ ಸದಸ್ಯರು ಉತ್ತಮ ವರ್ತನೆಯವರು. ಈ ಎಲ್ಲಾ ಅಂಶಗಳನ್ನು ಗಮನಿಸಿ ಅವರ ಬಿಡುಗಡೆಗೆ ಶಿಫಾರಸ್ಸು ನಡೆಸಿದ್ದೇನೆ ಎಂದರು.
ಇದೊಂದು ಆಕಸ್ಮಿಕವಾಗಿ ನಡೆದ ಘಟನೆ. ಈ ಪ್ರಕರಣದಲ್ಲಿ ಅಮಾಯಕರೂ ಸೇರಿಕೊಂಡಿದ್ದಾರೆ. ಅವರನ್ನು ಇನ್ನೂ ಶಿಕ್ಷಿಸಬೇಕೆಂಬ ದುರುದ್ದೇಶ ಕೆಲವರಿಗಿದೆ. ಅವರನ್ನೂ ಇನ್ನೂ ಶಿಕ್ಷಿಸುವ ಅಗತ್ಯವಿಲ್ಲ ಎಂದು ಶಾಸಕ ಸಿ.ಕೆ ರೌಲ್ಜಿ ತಮ್ಮ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಅಪರಾಧಿಗಳ ಬಿಡುಗಡೆ ವೇಳೆ ಸಿಹಿ ಹಂಚಿ ಸಂಭ್ರಮಿಸಿದ್ದನ್ನು ಕೂಡಾ ರೌಲ್ಜಿ ಸಮರ್ಥಿಸಿದ್ದು, ನ್ಯಾಯಾಲವೇ ಅವರನ್ನು ಬಿಡುಗಡೆ ಮಾಡಿ ಎಂದು ಹೇಳಿರುವಾಗ ಸಿಹಿ ಹಂಚುವುದರಲ್ಲಿ ತಪ್ಪೇನಿದೆ? ಆದರೆ ನಮ್ಮ ಸಮಿತಿಯವರು ಯಾರೂ ಹೂಹಾರ ಹಾಕಿಲ್ಲ. ಈ ಕುರಿತು ನಾನು ಹೆಚ್ಚು ಹೇಳುವುದಿಲ್ಲ ಎಂದಿದ್ದಾರೆ.