ದ್ವೇಷ ಭಾಷಣಕ್ಕೆ ಕಡಿವಾಣ ಹಾಕಬೇಕಿರುವ ಕೇಂದ್ರ ಸರ್ಕಾರವೇ ಈ ಭಾಷಣಗಳ ಪ್ರಾಯೋಜಕತ್ವ ವಹಿಸಿಕೊಂಡಿದೆ: ದಿನೇಶ್ ಗುಂಡೂರಾವ್

Prasthutha|

ಬೆಂಗಳೂರು: ದ್ವೇಷ ಭಾಷಣ ದೇಶದ ವಾತಾವರಣ ಹದಗೆಡಿಸುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ವಿಪರ್ಯಾಸವೆಂದರೆ ದ್ವೇಷ ಭಾಷಣಕ್ಕೆ ಕಡಿವಾಣ ಹಾಕಬೇಕಿರುವ ಕೇಂದ್ರ ಸರ್ಕಾರವೇ ಈ ಭಾಷಣಗಳ ಪ್ರಾಯೋಜಕತ್ವ ವಹಿಸಿಕೊಂಡಿದೆ. ಸರ್ಕಾರದ ಭಾಗವಾಗಿರುವವರೇ ದೇಶವನ್ನು ದ್ವೇಷ ಭಾಷಣದಿಂದ ಇಬ್ಭಾಗ ಮಾಡುತ್ತಿದ್ದಾರೆ.

- Advertisement -

ಹೀಗಿರುವಾಗ ದ್ವೇಷ ತಡೆಯುವರ್ಯಾರು? ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ದೇಶದಲ್ಲಿ ದ್ವೇಷದ ಜನಕರೇ ಪ್ರಧಾನಿ ಮೋದಿ. ಮೋದಿ ಸರ್ಕಾರ ಜನರಲ್ಲಿ ಧರ್ಮದ ವ್ಯಸನ ತುಂಬಿದ್ದೇ ಈ ದ್ವೇಷದ ವಾತಾವರಣಕ್ಕೆ ಕಾರಣ. ಮೋದಿ ಸರ್ಕಾರ ಬಹುತ್ವದ ಆಧಾರದ ಮೇಲೆ ನಿರ್ದಿಷ್ಟ ಸಮುದಾಯವೊಂದನ್ನು ಗುರಿ ಮಾಡಿ  ದ್ವೇಷ ಹರಡೋ ಕ್ರಿಮಿಗಳಿಗೆ ನೀರೆರೆಯುತ್ತಿದೆ. ಅದರ ಪ್ರತಿಫಲ ಇಂದು ದೇಶ ದ್ವೇಷದ ಗೂಡಾಗಿದೆ ಎಂದು ಕಿಡಿಕಾರಿದ್ದಾರೆ.

- Advertisement -

ಇಂದು ದೇಶದಲ್ಲಿ ಕಲಾವಿದನಲ್ಲಿ ಧರ್ಮ ಹುಡುಕುತ್ತಾರೆ, ಕ್ರೀಡಾಳುವಿನಲ್ಲಿ ಧರ್ಮ ಹುಡುಕುತ್ತಾರೆ, ಯಾವುದೇ ಕ್ಷೇತ್ರದ ಸಾಧಕನಲ್ಲಿ ಧರ್ಮ ಹುಡುಕುವ ಪರಿಪಾಠ ಬೆಳೆಯುತ್ತಿದೆ. ಈ ಧರ್ಮದ ರೋಗ ದೇಶದಲ್ಲಿ ಅಪಾಯಕಾರಿಯಾಗಿ ಹರಡಿದೆ. ಧರ್ಮದ ನಶೆ ಏರಿದಾಗ ದ್ವೇಷ ಕಾರದೆ, ಪ್ರೀತಿ ಹಂಚಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಜನರಲ್ಲಿ ಈ ಧರ್ಮಾಂಧತೆಯ ಅಮಲು ತುಂಬಿದ್ದು ಯಾರು? ದ್ವೇಷ ಭಾಷಣದಿಂದ ದೇಶದ ಸ್ವಾಸ್ಥ್ಯ ಹಾಳಾಗುತ್ತಿರುವುದನ್ನು ಸುಪ್ರೀಂ ಕೋರ್ಟ್ ಸೂಕ್ಷ್ಮವಾಗಿ ಗಮನಿಸಿದೆ. ಆದರೆ ಈ ಸೂಕ್ಷ್ಮತೆ ಮತ್ತು ಪ್ರಜ್ಞೆ ಇರಬೇಕಾದದ್ದು ಸರ್ಕಾರಕ್ಕೆ. ಧರ್ಮದ ಆಧಾರದಲ್ಲಿ ದೇಶ ಆಳಲು ಹೋದ ಹಿಟ್ಲರ್ ಮತ್ತು ಮುಸಲೋನಿ ಅಂತ್ಯ ಹೇಗಾಯ್ತು ಎಂದು ಆಳುವ ಸರ್ಕಾರ ಅರಿತುಕೊಳ್ಳಬೇಕು. ಇಲ್ಲದಿದ್ದರೆ ಅವರಿಗಾದ ಗತಿಯೇ ಇವರಿಗೆ ಎಂದು ಅವರು ಎಚ್ಚರಿಸಿದ್ದಾರೆ.

Join Whatsapp