ವಾಕ್ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಸಲ್ಲದು: ಆಂಧ್ರಪ್ರದೇಶ ರಾಜ್ಯಪಾಲ ಬಿಸ್ವ ಭೂಷಣ್ ಹರಿಚಂದನ್

Prasthutha|

ಬೆಂಗಳೂರು: ಸಂವಿಧಾನದ ನೀಡಿರುವ ಮೂಲಭೂತ ಹಕ್ಕುಗಳು ಸೂಕ್ತ ರೀತಿಯಲ್ಲಿ ಬಳಕೆಯಾಗಬೇಕು. ಯಾವುದೇ ಕಾರಣಕ್ಕೂ ಈ ವಲಯದಲ್ಲಿ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಬಾರದು ಎಂದು ಆಂಧ್ರ ಪ್ರದೇಶ ರಾಜ್ಯಪಾಲ ಬಿಸ್ವ  ಭೂಷಣ್ ಹರಿಚಂದನ್ ಹೇಳಿದ್ದಾರೆ.

- Advertisement -

ಇಂಡಿಯನ್ ಕಾನ್ಪರೆನ್ಸ್ ಆಫ್ ಇಂಟಲಕ್ಚುಯಲ್ಸ್ ಸಂಘಟನೆಯಿಂದ ನಗರದಲ್ಲಿ ಆಯೋಜಿಸಲಾದ “ಮೂಲಭೂತ ಹಕ್ಕುಗಳು – ನ್ಯಾಯಾಂಗದ ಪಾತ್ರ” ಕುರಿತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಾನೂನು ರಕ್ಷಣೆ ಮಾಡಬೇಕು ಮತ್ತು ಜೊತೆಯಲ್ಲಿ ವಾಕ್ ಸ್ವಾತಂತ್ರ್ಯವನ್ನೂ  ಸಂರಕ್ಷಿಸಬೇಕು.  ಸಂವಿಧಾನ ನಮಗೆ ನೀಡಿರುವ ನೀಡಿರುವ ವಾಕ್ ಸ್ವಾತಂತ್ರ್ಯ ವಿಚಾರದಲ್ಲಿ ದೇಶದ ಸಾರ್ವಭೌಮತೆ, ಏಕತೆಗೆ ಧಕ್ಕೆ ಬಂದಾಗ ಮಾತ್ರ ನಿರ್ಬಂಧಗಳನ್ನು ವಿಧಿಸಬೇಕು ಎಂದರು. 

ಕಾನೂನು ಸದಾ ಸಮಾಜದ ಪರವಾಗಿರಬೇಕು. ಕಾನೂನಿಗೆ ಮಾನವೀಯ ಮುಖವಿರಬೇಕು. ಮೊದಲು ದೇಶ, ನಂತರ ನಾಗರೀಕರು ಎನ್ನುವ ತತ್ವ ಪರಿಪಾಲನೆಯಾಗಬೇಕು. ಇಂತಹ ವಾತಾವರಣವಿದ್ದರೆ ಸೌಹಾರ್ದತೆ ಮನೆ ಮಾಡುತ್ತದೆ ಎಂದರು.

- Advertisement -

ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಅತ್ಯಂತ ಮಹತ್ವದ್ದಾಗಿದ್ದು, ಸಂವಿಧಾನದ ಮೂಲ ರಚನೆ, ಸ್ವರೂಪಕ್ಕೆ ಧಕ್ಕೆಯಾಗದಂತೆ ಸಂವಿಧಾನಕ್ಕೆ ತಿದ್ದುಪಡಿಗಳನ್ನು ಮಾಡಬಹುದು ಎಂದು ಹೇಳಿದೆ. ಈ ತೀರ್ಪು ಎಲ್ಲಾ ಕಾಲಕ್ಕೂ ಸಲ್ಲುವಂತಹದ್ದು ಎಂದು ಹೇಳಿದರು.

ನಿವೃತ್ತ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿ. ಗೋಪಾಲಗೌಡ ಮಾತನಾಡಿ, ಹಿರಿಯ ಮುತ್ಸದ್ಧಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಮೂಲಭೂತ ಹಕ್ಕುಗಳ ಬಗ್ಗೆ ವ್ಯಾಪಕ ಪರಿಶೀಲನೆ ನಡೆಸಿದ ನಂತರ ಇದಕ್ಕೆ ಸ್ಪಷ್ಟ ಸ್ವರೂಪ ನೀಡಿದರು. ಮೂಲಭೂತ ಹಕ್ಕುಗಳಿಂದಾಗಿ ಶೇ 50ರಷ್ಟಿರುವ ಮಹಿಳೆಯರು, ಎಸ್.ಸಿ, ಎಸ್.ಟಿ ಸಮುದಾಯದ ಹಕ್ಕುಗಳ ರಕ್ಷಣೆಯಾಗುತ್ತಿದೆ ಎಂದರು.

ಮೂಲಭೂತ ಹಕ್ಕುಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ತನ್ನ ಪಾತ್ರವನ್ನು ಮಹತ್ವದಿಂದ ನಿರ್ವಹಿಸುತ್ತಿದೆ. ಶಾಸಕಾಂಗ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಸದೀಯ ಪಟುಗಳು ಇಂತಹ ವಿಚಾರದಲ್ಲಿ ಸುಮ್ಮನೆ ಕುಳಿತಿಲ್ಲ. ಎಲ್ಲರ ಪರಿಶ್ರಮದಿಂದ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿವರಿಗೆ ವಿವಿಧ ವಲಯಗಳಲ್ಲಿ ಮೀಸಲಾತಿ ಮತ್ತಿತರ ಸೌಲಭ್ಯಗಳು ದೊರೆಯುತ್ತಿವೆ ಎಂದು ಹೇಳಿದರು.

ಸಮ್ಮೇಳನದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ನಟರಾಜನ್, ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್, ನ್ಯಾಯಮೂರ್ತಿ ಕೆ. ಭಕ್ತ ವತ್ಸಲ, ನ್ಯಾಯಮೂರ್ತಿ ಸಂಜೀವ್ ಕುಮಾರ್ ಪಾಣಿ ಗ್ರಾಹಿ, ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತ ಜಿ.ಆರ್. ರೆಡ್ಡಿ, ಏರೋನಾಟಿಕಲ್ ಸಿಸ್ಟಮ್ಸ್ ನ ಪ್ರಧಾನ ನಿರ್ದೇಶಕರಾದ ಕ್ಷಿಪಣಿ ಮಹಿಳೆ ಎಂದೇ ಖ್ಯಾತರಾದ ತೆಸ್ಸಾ ಥಾಮಸ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಮತ್ತಿತರ ಗಣ್ಯರು ಸಮ್ಮೇಳನದಲ್ಲಿ ಪಾಲ್ಗೊಂಡರು

Join Whatsapp