ಬೆಂಗಳೂರು: ಕೈಗಾರಿಕಾ ತರಬೇತಿ ಕೇಂದ್ರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ವಿತರಣೆ ಹಗರಣ ಆರೋಪಕ್ಕೆ ಸಂಬಂಧಿಸಿ ಸಚಿವ ಅಶ್ವತ್ಥ್ ನಾರಾಯಣ್ ರವರು ಕಳುಹಿಸಿರುವ ಲೀಗಲ್ ನೋಟಿಸ್ ಗೆ ಹೆದರುವುದಿಲ್ಲ. ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪಕ್ಷದ ಹೋರಾಟ ನಿರ್ಭೀತಿಯಿಂದ ಮುಂದುವರಿಯಲಿದೆ ಎಂದು ಎಎಪಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್ ದಾಸರಿ, “13 ಸಾವಿರ ವಿದ್ಯಾರ್ಥಿಗಳಿಗೆ 22 ಕೋಟಿ ರೂಪಾಯಿ ವೆಚ್ಚದಲ್ಲಿ ಅಗತ್ಯ ಸಲಕರಣೆಗಳನ್ನು ಒಳಗೊಂಡ ಟೂಲ್ ಕಿಟ್ ಗಳನ್ನು ಖರೀದಿಸುವ ಗುತ್ತಿಗೆಯಲ್ಲಿ ಭಾರೀ ಅಕ್ರಮ ನಡೆದಿರುವ ಕುರಿತು ದಾಖಲೆ ಸಹಿತ ಆರೋಪ ಮಾಡಿದ್ದೆವು. ಈ ಕುರಿತು ನ್ಯಾಯಾಂಗ ತನಿಖೆ ಆಗಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದೆವು. ಆದರೆ ಸರ್ಕಾರವು ತನಿಖೆಗೆ ವಹಿಸದ ಕಾರಣ ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಿದ್ದೆವು. ಸಚಿವ ಅಶ್ವತ್ಥ್ ನಾರಾಯಣ್ ರವರು ನಮ್ಮ ಆರೋಪಗಳಿಗೆ ಸ್ಪಷ್ಟೀಕರಣ ನೀಡುವ ಬದಲು ಪಕ್ಷದ ಮುಖಂಡರಾದ ಮೋಹನ್ ದಾಸರಿ, ಡಾ. ವೆಂಕಟೇಶ್ ಹಾಗೂ ಚನ್ನಪ್ಪಗೌಡ ನೆಲ್ಲೂರು ವಿರುದ್ಧ ವಕೀಲರಿಂದ ಲೀಗಲ್ ನೋಟಿಸ್ ಕಳುಹಿಸಿ ನಮ್ಮ ಬಾಯಿ ಮುಚ್ಚಿಸಲು ಯತ್ನಿಸಿದ್ದಾರೆ” ಎಂದು ಹೇಳಿದರು.
ಎಎಪಿ ಮುಖಂಡ ಹಾಗೂ ಮಾಜಿ ಸಂಸದ ಡಾ. ವೆಂಕಟೇಶ್ ಮಾತನಾಡಿ, “ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಸರ್ಕಾರವು ಅನ್ಯಾಯ ಮಾಡಿದೆ. ಟೆಂಡರ್ ನಲ್ಲಾದ ಅಕ್ರಮದಿಂದಾಗಿ ಅನುದಾನದ ದೊಡ್ಡ ಪಾಲು ಭ್ರಷ್ಟ ಸಚಿವರು ಹಾಗೂ ಗುತ್ತಿಗೆದಾರರ ಜೇಬು ಸೇರಿ, ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಉಪಕರಣಗಳು ಪೂರೈಕೆಯಾಗಲಿದೆ. ಭ್ರಷ್ಟಾಚಾರವನ್ನು ಪ್ರಶ್ನಿಸಿದ್ದಕ್ಕೆ 5 ಕೋಟಿ ರೂಪಾಯಿ ಪರಿಹಾರ ಕೇಳಿ ಸಚಿವ ಅಶ್ವತ್ಥ್ ನಾರಾಯಣ್ ನೋಟಿಸ್ ಕಳುಹಿಸಿರುವುದು ಹಾಗೂ ಅದನ್ನು ಕಟ್ಟದಿದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಬೆದರಿಕೆ ಹಾಕಿರುವುದು ಖಂಡನೀಯ” ಎಂದು ಹೇಳಿದರು.
ಎಎಪಿಯ ರಾಜಕೀಯ ಚಟುವಟಿಕೆ ವಿಭಾಗದ ಅಧ್ಯಕ್ಷ ಚನ್ನಪ್ಪಗೌಡ ನೆಲ್ಲೂರು ಮಾತನಾಡಿ, “ಟೆಂಡರ್ ನಲ್ಲಿ ಭಾಗವಹಿಸಿದ್ದ ಇಂಟಲೆಕ್ ಸಿಸ್ಟಮ್ಸ್ ಸಂಸ್ಥೆಯು ಇಲಾಖೆಗೆ ನಕಲಿ ದಾಖಲೆಗಳನ್ನು ನೀಡಿ ಅನುಮೋದನೆ ಪಡೆದುಕೊಂಡಿದೆ. ಮೊದಲ ಬಾರಿ ಟೆಂಡರ್ ಕರೆದಾಗ ಇದೇ ಕಂಪನಿಗೆ ತಾಂತ್ರಿಕ ಅರ್ಹತೆ ಇರಲಿಲ್ಲ. ಅದಕ್ಕಾಗಿ ಟೆಂಡರ್ ಪ್ರಕ್ರಿಯೆಯನ್ನೇ ರದ್ದುಗೊಳಿಸಿ, ಮರು ಟೆಂಡರ್ ಕರೆದು ಇದೇ ಕಂಪನಿಗೆ ಅನುವು ಮಾಡಿಕೊಡಲಾಗಿದೆ. ಇದೇ ಕಂಪನಿಯು ಈ ಹಿಂದೆ ಬೇರೆಯವರಿಗೆ 22 ಕೋಟಿ ರೂಪಾಯಿ ಹಾಗೂ 11 ಕೋಟಿ ರೂಪಾಯಿ ಮೊತ್ತದ ಸಾಮಗ್ರಿಗಳನ್ನು ಪೂರೈಸಿರುವ ಹಾಗೆ ಸೃಷ್ಟಿಸಿರುವ ಜಿಎಸ್ಟಿ ಬಿಲ್ಗಳು ಸಂಪೂರ್ಣ ನಕಲಿಯಾಗಿವೆ. ಜಿಎಸ್ಟಿ ಮಂಡಳಿ ಕೂಡ ಇವು ನಕಲಿ ಬಿಲ್ ಎಂದು ರುಜುವಾತು ಪಡಿಸಿದೆ. ಅಶ್ವತ್ಥ್ ನಾರಾಯಣ್ರವರು ಈ ಕುರಿತು ಪ್ರತಿಕ್ರಿಯಿಸುತ್ತಿಲ್ಲವೇಕೆ?” ಎಂದು ಪ್ರಶ್ನಿಸಿದರು.